ಜಗಳೂರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ, ದೊಣೆಹಳ್ಳಿ ಗ್ರಾಪಂ ವ್ಯಾಪ್ತಿಯ ಮರೇನಹಳ್ಳಿಯಲ್ಲಿ ಬಿಲ್ ಕಲೆಕ್ಟರ್ ಮೆಹಬೂಬ್ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಆರ್‌ಡಿಪಿಆರ್) ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
- ಶಾಸಕ ಬಿ.ದೇವೇಂದ್ರಪ್ಪಗೆ ನೌಕರರ ಮನವಿ । ಸಮಸ್ಯೆ ಬಗೆಹರಿಸುವ ಭರವಸೆ
- - -ಕನ್ನಡಪ್ರಭವಾರ್ತೆ ಜಗಳೂರು
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ, ದೊಣೆಹಳ್ಳಿ ಗ್ರಾಪಂ ವ್ಯಾಪ್ತಿಯ ಮರೇನಹಳ್ಳಿಯಲ್ಲಿ ಬಿಲ್ ಕಲೆಕ್ಟರ್ ಮೆಹಬೂಬ್ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಆರ್‌ಡಿಪಿಆರ್) ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಸಿಬ್ಬಂದಿ ಪ್ರತಿಭಟನೆ ನಡೆಸಿದರು.ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ್ ಮಾತನಾಡಿ, ಜೂನ್ 8ರಂದು ಮರೇನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ವೀಕ್ಷಣೆಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಂಚಪ್ಪ ಎನ್.ಕೆ. ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಾದಿಕ್ ಉಲ್ಲಾ ಭೇಟಿ ನೀಡಿದ್ದರು. ಈ ಸಂದರ್ಭ ಕರ್ತವ್ಯ ನಿಮಿತ್ತ ಸ್ಥಳಕ್ಕೆ ಆಗಮಿಸಿದ ತೆರಿಗೆ ವಸೂಲಿಗಾರರಾದ ಮಹಬೂಬ್ ಮೇಲೆ ಕೆಲವು ಕಿಡಿಗೇಡಿಗಳು ಏಕಾಏಕಿ ತೀವ್ರ ಹಲ್ಲೆ ನಡೆಸಿದ್ದು ಖಂಡನೀಯ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಹಲ್ಲೆ ಆರೋಪಿಗಳ ವಿರುದ್ಧ ತಕ್ಷಣವೇ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಗ್ರಾಪಂ ನೌಕರರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು. ಸರ್ಕಾರಿ ವೈದ್ಯರ ಮೇಲಿನ ಹಲ್ಲೆ ತಡೆಗೆ ಇರುವ ಮಾದರಿಯಲ್ಲೇ, ಕರ್ತವ್ಯನಿರತ ಇತರೆ ಸರ್ಕಾರಿ ನೌಕರರ ಹಾಗೂ ಆರ್‌ಡಿಪಿಆರ್ ಸಿಬ್ಬಂದಿ ರಕ್ಷಣೆಗೂ ಕಠಿಣ ಕಾನೂನು ರೂಪಿಸಬೇಕು. ಪೊಲೀಸರೇ ನೇರವಾಗಿ ಸುಮೋಟೋ ದೂರು ದಾಖಲಿಸಿ ನೌಕರರಿಗೆ ಕಾನೂನು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.ಕಾನೂನು ಕೈಗೆತ್ತಿಕೊಂಡರೆ ತಕ್ಕ ಶಾಸ್ತಿ:
ಶಾಸಕ ಬಿ.ದೇವೇಂದ್ರಪ್ಪ ಮನವಿ ಸ್ವೀಕರಿಸಿ ಮಾತನಾಡಿ, ಯಾರೇ, ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿನ ಚೌಕಟ್ಟು ಎಲ್ಲರಿಗೂ ಒಂದೇ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶವಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೌಡಿಸಂ ಮಾಡುವವರ ವಿರುದ್ಧ ಕಾನೂನು ಮೂಲಕ ತಕ್ಕಶಾಸ್ತಿ ಮಾಡಿಸುತ್ತೇನೆ. ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಪಾತಣ್ಣ, ಬೆಂಗಳೂರು ವಿಭಾಗೀಯ ಅಧ್ಯಕ್ಷ ಆಂಜನೇಯ, ಡಿಇಒ ಸಂಘದ ಜಿಲ್ಲಾಧ್ಯಕ್ಷ ಸಿದ್ದೇಶ್, ಪಿಡಿಒ ರಾಜ್ಯ ಪರಿಷತ್ ಸದಸ್ಯ ಗಣೇಶ್, ತಾಲೂಕು ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಅನಿಲ್, ಖಜಾಂಚಿ ಮರುಳಸಿದ್ದಪ್ಪ, ಜಿಲ್ಲಾ ನರೇಗಾ ಸಂಘದ ಅಧ್ಯಕ್ಷ ಕೆ.ಜಿ.ಹರ್ಷಾ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಪಿಡಿಒ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
- - --15 ಜೆ.ಜಿ.ಎಲ್.1: ಪ್ರತಿಭಟನೆ ನಡೆಸಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.