ಸಿಜೆಐ ಗವಾಯಿ ಮೇಲಿನ ಶೂ ದಾಳಿ ಖಂಡಿಸಿ ಪ್ರತಿಭಟನೆ

| Published : Oct 09 2025, 02:00 AM IST

ಸಾರಾಂಶ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಹಿರಿಯ ವಕೀಲರೊಬ್ಬರು ಶೂ ಎಸೆದು ಅವಮಾನ ಮಾಡಿದ ಘಟನೆ ಖಂಡಿಸಿ, ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಬುಧವಾರ ಆಕ್ರೋಶ ವ್ಯಕ್ತಪಡಿಸಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಧರಣಿ ನಡೆಸಿದರು.ಸಂಘಟನೆಯವರು ಸರ್ಕಾರದಿಂದ ನ್ಯಾಯಾಂಗದ ಗೌರವವನ್ನು ಕಾಪಾಡಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಇಂತಹ ಧಾರ್ಮಿಕ ಅಂಧಭಕ್ತಿಯ ಹೆಸರಿನಲ್ಲಿ ನಡೆಯುವ ಹಿಂಸಾತ್ಮಕ ನಡವಳಿಕೆಗಳನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಹಿರಿಯ ವಕೀಲರೊಬ್ಬರು ಶೂ ಎಸೆದು ಅವಮಾನ ಮಾಡಿದ ಘಟನೆ ಖಂಡಿಸಿ, ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಬುಧವಾರ ಆಕ್ರೋಶ ವ್ಯಕ್ತಪಡಿಸಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಧರಣಿ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವುದು ಕೇವಲ ವ್ಯಕ್ತಿಗತ ಹಲ್ಲೆಯಲ್ಲ, ಇದು ದೇಶದ ಪ್ರಜಾಪ್ರಭುತ್ವ, ಕಾನೂನು, ಸಂವಿಧಾನ ಹಾಗೂ ಜನರ ಗೌರವದ ಮೇಲಿನ ದಾಳಿ. ಹಾಸನ ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳು ಈ ಅಘಾತಕಾರಿ ಘಟನೆಯನ್ನು ತೀವ್ರವಾಗಿ ಖಂಡಿಸುತ್ತವೆ ಎಂದರು. ಶೂ ಎಸೆದ ವಕೀಲನು ದೇವರು ಪ್ರಚೋದನೆ ನೀಡಿದ್ದಾನೆ ಎಂದು ಹೇಳಿದ್ದಾನೆ. ನಾವು ಕೇಳುವುದು ಯಾವ ದೇವರು ನಿಮಗೆ ಇಂತಹ ಅವಿವೇಕದ ಪ್ರಚೋದನೆ ನೀಡಿದ್ದಾನೆ ಎಂದು ತೀವ್ರ ಕಿಡಿಕಾರಿದರು.

ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾದ ಈ ಕೃತ್ಯವನ್ನು ರಾಷ್ಟ್ರ ವಿರೋಧಿ ಮನೋಭಾವದ ಪ್ರತೀಕವೆಂದು ಖಂಡಿಸಿದರು. ಸಂವಿಧಾನವನ್ನು ರಕ್ಷಿಸುವವರು, ನ್ಯಾಯದ ಹಾದಿಯಲ್ಲಿ ನಡೆಯುವವರಿಗೆ ಶತ್ರುತ್ವ ತೋರಿಸುವುದು ಪ್ರಜಾಪ್ರಭುತ್ವಕ್ಕೆ ಅಪಮಾನ ಎಂದು ಹೇಳಿದರು.

ಸಂಘಟನೆಯವರು ಸರ್ಕಾರದಿಂದ ನ್ಯಾಯಾಂಗದ ಗೌರವವನ್ನು ಕಾಪಾಡಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಇಂತಹ ಧಾರ್ಮಿಕ ಅಂಧಭಕ್ತಿಯ ಹೆಸರಿನಲ್ಲಿ ನಡೆಯುವ ಹಿಂಸಾತ್ಮಕ ನಡವಳಿಕೆಗಳನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡರು ಕೃಷ್ಣದಾಸ್, ಈರೇಶ್ ಹಿರೇಹಳ್ಳಿ, ಎಂ. ಸೋಮಶೇಖರ್, ಪ್ರೊ. ಕೃಷ್ಣಯ್ಯ, ಶಿವಮ್ಮ, ಭಾಗ್ಯ ಕಲವೀರ್, ನಿವೃತ್ತ ಇಂಜಿನಿಯರ್ ಪುಟ್ಟರಾಜು, ಉಳುವಾರೆ ಹರೀಶ್, ತೋಟೇಶ್, ಜಗದೀಶ್, ರಮೇಶ್, ಪ್ರಕಾಶ್, ಕುಮಾರ್ ಗೌರವ, ಧರ್ಮ, ಕುಮಾರಸ್ವಾಮಿ, ರಾಮು, ನಲ್ಲಪ್ಪ ಸೇರಿ ಅನೇಕ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಘೋಷಣೆಗಳನ್ನು ಕೂಗಿದರು.