ಧಾರವಾಡ:
ತಾಲೂಕಿನ ಹೆಬ್ಬಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಖಂಡಿಸಿ ಭಗತ್ ಸಿಂಗ್ ಯುವ ಸೇವಾ ಸಂಘದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬುಧವಾರ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು.ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ವರ್ತನೆ ಸರಿ ಇಲ್ಲ. ಕರ್ತವ್ಯಕ್ಕೆ ಸರಿಯಾದ ವೇಳೆಗೆ ಬರುವುದಿಲ್ಲ. ಗಂಟೆಗಟ್ಟಲೆ ಊಟಕ್ಕೆ ಹೋಗುತ್ತಾರೆ. ಅಲ್ಲದೇ ವೈದ್ಯರು ರೋಗಿಗಳನ್ನು ಸರಿಯಾಗಿ ಪರಿಶೀಲಿಸದೆ, ಅಸ್ಪೃಶ್ಯರಂತೆ ವಿಚಾರಿಸಿ ಮಾತ್ರೆ, ಔಷಧ ಬರೆದು ಕೊಡುತ್ತಾರೆ. ಕಳೆದ ಅನೇಕ ದಿನಗಳಿಂದ ಆಸ್ಪತ್ರೆಯಲ್ಲಿ ಟಿಟಿ ಇಂಜಕ್ಷನ್ ಸಹ ಇಲ್ಲ. ಮಾತ್ರೆ, ಔಷಧ ಹೊರಗಡೆ ತಗೆದುಕೊಳ್ಳಿ ಎನ್ನುತ್ತಾರೆ. ಬಡವರಿಗೆ ಉತ್ತಮ ಸೇವೆ ನೀಡಬೇಕಾದ ಆರೋಗ್ಯ ಕೆಂದ್ರವೇ ಜನರಿಗೆ ನರಕಯಾತನೆ ನೀಡುತ್ತಿದೆ ಎಂದು ಆರೋಪಿಸಿದರು.
ಆರೋಗ್ಯ ಕೇಂದ್ರದಲ್ಲಿರುವ ಆ್ಯಂಬುಲೆನ್ಸ್ ಬ್ಯಾಟರಿ ಕೆಟ್ಟು ಅನೇಕ ತಿಂಗಳುಗಳೇ ಕಳೆದಿದ್ದು ಈ ವರೆಗೆ ದುರಸ್ತಿಯಾಗಿಲ್ಲ. ಆ್ಯಂಬುಲೆನ್ಸ್ ಇಲ್ಲದೆ ಜನರು ಖಾಸಗಿ ವಾಹನಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ. ರಾತ್ರಿ ಪಾಳೆಯಲ್ಲಿರುವ ನರ್ಸ್ ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಒಟ್ಟಾರೆಯಾಗಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಅದಕ್ಕೆ ಸ್ಥಳಕ್ಕೆ ಸಂಬಂಧಿಸಿದ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಅಥವಾ ಡಿಎಚ್‌ಒ ಬರುವರೆಗೂ ಪ್ರತಿಭಟನೆ ನಿಲ್ಲಿಸುವದಿಲ್ಲ ಎಂದು ಬಿಗಿ ಪಟ್ಟು ಹಿಡಿದರು.ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಎಚ್‌ಒ ಎಸ್.ಎಂ. ಹೊನಕೇರಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಹತ್ತು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಿ ಉತ್ತಮ ಸೇವೆ ಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದುಕೊಂಡರು.
ಈ ವೇಳೆ ಮಂಜುನಾಥ ಭೀಮಕ್ಕನವರ, ನಿಂಗಪ್ಪ ಮೊರಬದ ಸೇರಿದಂತೆ ಭಗತ್ ಸಿಂಗ್ ಯುವ ಸೇವಾ ಸಂಘದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.