- ನೀಟ್ ಪರೀಕ್ಷಾ ಅಕ್ರಮ ತನಿಖೆ, ಕೇಂದ್ರ ಶಿಕ್ಷಣ ಸಚಿವರ ವಜಾಕ್ಕೆ ಪ್ರಗತಿಪರರ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆನೀಟ್ ಪ್ರಶ್ನೆಪತ್ರಿಕೆ ಅಕ್ರಮದ ತನಿಖೆ ಕೈಗೊಳ್ಳುವಂತೆ, ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವರ ವಜಾಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂಥರ್‌ನಲ್ಲಿ 21 ದಿನಗಳಿಂದ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸಿದ್ದ ಸಾಮಾಜಿಕ ಹೋರಾಟಗಾರ, ಪರಿಸರವಾದಿ ಸೋನಂ ವಾಂಗ್ಚುಕ್ ವಿರುದ್ಧ ಬಲವಂತದ ಕ್ರಮ ಖಂಡಿಸಿ ಪ್ರಗತಿಪರ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ವೇದಿಕೆ ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದ ಮುಖಂಡರು, ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ವಿರುದ್ಧ ಕೈಗೊಂಡ ಬಲವಂತದ ಕ್ರಮ ಖಂಡಿಸಿದರು. ನ್ಯಾಯಯುತ, ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟವನ್ನು ಹತ್ತಿಕ್ಕುವ ಕೆಲಸವಾಗಿದೆ ಇದಾಗಿದೆ ಎಂದು ಆರೋಪಿಸಿ ಉಪ ವಿಭಾಗಾಧಿಕಾರಿ ಮುಖಾಂತರ ರಾಷ್ಚ್ರಪತಿ ಅವರಿಗೆ ಮನವಿ ಅರ್ಪಿಸಲಾಯಿತು.ಇದೇ ವೇಳೆ ಮಾತನಾಡಿದ ವೇದಿಕೆ ಮುಖಂಡರು, ದೆಹಲಿಯಲ್ಲಿ 21 ದಿನಗಳಿಂದ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಸೋನಂ ವಾಂಗ್ಚುಕ್ ಅವರ ವಿರುದ್ಧ ಬಲವಂತದ ಕ್ರಮ ತೀವ್ರವಾಗಿ ಖಂಡಿಸುತ್ತೇವೆ. ವಾಂಗ್ಚುಕ್ ಜೊತೆಗೆ ಕೇಂದ್ರ ಸರ್ಕಾರ ಚರ್ಚೆಯನ್ನೇ ನಡೆಸದೇ, ಆರೋಗ್ಯ ಹದಗೆಟ್ಟ ಬಳಿಕ ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.
ಶಾಂತಿಯುತ ಹೋರಾಟ ನಡೆಸುವ ನಾಗರೀಕರೊಂದಿಗೆ ಸಂವಾದ, ಚರ್ಚೆ ನಡೆಸುವ ಬದಲು ಬಲಪ್ರಯೋಗದ ಮಾರ್ಗ ಅನುಸರಿಸಿದ್ದು ಖಂಡನೀಯ. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಡುವ ನೀಟ್ ಪರೀಕ್ಷೆಯಲ್ಲಿ ಆದ ಅಕ್ರಮಗಳು ಶಿಕ್ಷಣ ವ್ಯವಸ್ಥೆಯ ಮೇಲೆ ಜನರಿಗೆ ಇದ್ದಂತಹ ವಿಶ್ವಾಸಕ್ಕೆ ಧಕ್ಕೆ ತಂದಿವೆ. ಇಂತಹ ಪ್ರಕರಣಗಳಿಗೆ ರಾಜಕೀಯ ಹಾಗೂ ಆಡಳಿತಾತ್ಮಕ ಹೊಣೆಗಾರಿಕೆ ನಿಗದಿಪಡಿಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ತಕ್ಷಣವೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಸಂಪುಟದಿಂದ ವಜಾಗೊಳಿಸಬೇಕು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರದ್ದುಗೊಳಿಸಬೇಕು. ನೀಟ್ ಪರೀಕ್ಷಾ ಅಕ್ರಮಗಳಿಂದ ಬಾಧಿತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಮೇಲಿನ ಬಲವಂತದ ಕ್ರಮದ ಕುರಿತಂತೆ ರಾಷ್ಟ್ರಪತಿಯವರು ಮಧ್ಯ ಪ್ರವೇಶಿಸಿ, ನ್ಯಾಯ ಒದಗಿಸಬೇಕು. ನೀಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಸ್ವಾಯತ್ತ ಪರೀಕ್ಷಾ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ತಾಕೀತು ಮಾಡಿದರು.
ನೀಟ್ ಪರೀಕ್ಷಾ ಅಕ್ರಮಗಳಿಂದ ಮಾನಸಿಕ ಆಘಾತಕ್ಕೊಳಗಾಗಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ನ್ಯಾಯ ಒದಗಿಸಬೇಕು. ಶಾಂತಿಯುತ ಪ್ರತಿಭಟನೆ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನೀಟ್ ಪರೀಕ್ಷಾ ಅಕ್ರಮದ ಸೂತ್ರದಾರರು, ಇದರ ಹಿಂದೆ ಇರುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅಂತಹವರನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.ವೇದಿಕೆ ಮುಖಂಡರಾದ ಆವರಗೆರೆ ಎಚ್.ಜಿ. ಉಮೇಶ, ಆವರಗೆರೆ ಚಂದ್ರು, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಆದಿಲ್ ಖಾನ್, ಸತೀಶ ಅರವಿಂದ, ಮಧು ತೊಗಲೇರಿ, ಬಾನಪ್ಪ, ಪವಿತ್ರಾ, ಇಫ್ಟಾದ ಐರಣಿ ಚಂದ್ರು, ಸರೋಜಾ ಇತರರು ಇದ್ದರು.
- - --20ಕೆಡಿವಿಜಿ1, 2:
ದೆಹಲಿಯಲ್ಲಿ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಮೇಲಿನ ಬಲವಂತದ ಕ್ರಮ ಖಂಡಿಸಿ ದಾವಣಗೆರೆಯಲ್ಲಿ ಸೋಮವಾರ ಪ್ರಗತಿಪರ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.