ಬಾಣಂತಿಯರ ಸಾವು ಖಂಡಿಸಿ ಪ್ರತಿಭಟನೆ

| Published : Jan 03 2025, 12:32 AM IST

ಸಾರಾಂಶ

ರಾಜ್ಯಾದ್ಯಂದ ಚಿಕಿತ್ಸೆ ಸಿಗದೆ ಬಾಣಂತಿಯರು ಸಾವನ್ನಪ್ಪುತ್ತಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮವಹಿಸದೆ ಇರುವುದನ್ನು ಖಂಡಿಸಿ ನಗರದ ಬಸವರೇಶ್ವರ ವೃತ್ತದಲ್ಲಿ ಬಿಜೆಪಿ ಗುರುವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿ, ಹೆದ್ದಾರಿ ತಡೆ ನಡೆಸಿ ಬಿಜೆಪಿ ಕಾರ್ಯಕರ್ತರ ಆಕ್ರೋಶಕನ್ನಡಪ್ರಭ ವಾರ್ತೆ ಕೊಪ್ಪಳ

ರಾಜ್ಯಾದ್ಯಂದ ಚಿಕಿತ್ಸೆ ಸಿಗದೆ ಬಾಣಂತಿಯರು ಸಾವನ್ನಪ್ಪುತ್ತಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮವಹಿಸದೆ ಇರುವುದನ್ನು ಖಂಡಿಸಿ ನಗರದ ಬಸವರೇಶ್ವರ ವೃತ್ತದಲ್ಲಿ ಬಿಜೆಪಿ ಗುರುವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿ, ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಆರೋಗ್ಯ ಸಚಿವರು ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಮಾತನಾಡಿ, ರಾಜ್ಯದಲ್ಲಿ ಸಾಲು ಸಾಲು ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ. ಹಸುಗೂಸುಗಳು ಸಾವನ್ನಪ್ಪುತ್ತಿವೆ. ಆದರೂ ರಾಜ್ಯ ಸರ್ಕಾರ ಕಣ್ಣು ತೆರೆದು ನೋಡುತ್ತಿಲ್ಲ. ಆರೋಗ್ಯ ಸಚಿವರು ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಾಣಂತಿಯರ ಸಾವನ್ನು ತಡೆಯಬೇಕು ಮತ್ತು ಸಾವಿಗೆ ಕಾರಣ ಪತ್ತೆ ಮಾಡಿ, ಔಷಧಿಯಿಂದಲೂ ಸಮಸ್ಯೆಯಾಗುತ್ತಿದ್ದಂತೆ ಔಷಧಿ ಕಂಪನಿಗಳ ವಿರುದ್ಧವೂ ಕ್ರಮವಹಿಸುವಂತೆ ಆಗ್ರಹಿಸಿದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ಜೀವಕ್ಕೆ ಬೆಲೆಯೇ ಇಲ್ಲದಂತೆ ಆಗುತ್ತಿದೆ. ಹಸುಗೂಸು ಬಿಟ್ಟು ಹೆತ್ತ ತಾಯಿಯರು ಸಾವನ್ನಪ್ಪುತ್ತಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸುತ್ತಿಲ್ಲ. ಅಷ್ಟಕ್ಕೂ ಬಾಣಂತಿಯರು ಸಾವಾಗಿರುವುದು ಜಿಲ್ಲಾಸ್ಪತ್ರೆಯಲ್ಲಿ ನೀಡಿದ ದ್ರಾವಣದಿಂದ ಎಂದು ವರದಿ ಬಂದಿದ್ದರೂ ದ್ರಾವಣ ಪೂರೈಕೆ ಮಾಡಿದ ಕಂಪನಿ ಯಾವುದು, ಅವರ ಮೇಲೆ ಯಾಕೇ ಸೂಕ್ತ ಕ್ರಮವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಬಾಣಂತಿಯರ ಜೊತೆಗೆ ಗುತ್ತಿಗೆದಾರರು, ಅಧಿಕಾರಿಗಳು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ, ಹಲವಾರು ಗ್ಯಾರಂಟಿ ನೀಡಿರುವ ರಾಜ್ಯ ಸರ್ಕಾರ ಸಾವಿನ ಗ್ಯಾರಂಟಿ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಬಸವರಾಜ ಕ್ಯಾವಟರ್‌ ಮಾತನಾಡಿ, ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬಾಣಂತಿಯರ ಸಾವಿಗೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಇರುವುದೇ ಪ್ರಮುಖ ಕಾರಣವಾಗಿದೆ. ಹೀಗಾಗಿ, ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನು ನಿಗಿಸಬೇಕು. ಅಗತ್ಯ ಮೂಲಭೂತ ಸೌಕರ್ಯ ನೀಡಬೇಕು. ಇದೆಲ್ಲವೂ ಗೊತ್ತಿದ್ದರೂ ರಾಜ್ಯ ಸರ್ಕಾರ ಹೊಣೆಗೆಡಿತನದಿಂದ ವರ್ತಿಸುತ್ತಿದೆ ಎಂದರು.

ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ವಾಣಿಶ್ರೀ ಮಠ, ಮಹಿಳಾ ಜಿಲ್ಲಾಧ್ಯಕ್ಷೆ ರತ್ನಕುಮಾರಿ, ಮಹಾಲಕ್ಷ್ಮಿ ಕಂದಾರಿ, ಮಹೇಶ ಅಂಗಡಿ, ಕೀರ್ತಿ ಪಾಟೀಲ್ ಸೇರಿದಂತೆ ಅನೇಕರು ಇದ್ದರು.