ಸಾರಾಂಶ
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆ ಆದೇಶವನ್ನು ಕೇಂದ್ರದ ವರಿಷ್ಠರು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ರಬಕವಿಯ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆ ಆದೇಶವನ್ನು ಕೇಂದ್ರದ ವರಿಷ್ಠರು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ರಬಕವಿಯ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ರಬಕವಿಯ ಭಗೀರಥ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಶ್ರೀಶೈಲ ದಲಾಲ ಮಾತನಾಡಿ, ಬಸನಗೌಡ ಪಾಟೀಲಯತ್ನಾಳ ಅವರು ಎಂದಿಗೂ ಬಿಜೆಪಿ ವಿರುದ್ಧ ನಡೆದುಕೊಂಡಿಲ್ಲ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ. ಬದಲಿಗೆ ಉತ್ತರ ಕರ್ನಾಟಕದ ಏಳ್ಗೆಗಾಗಿ ಶ್ರಮಿಸಿದ್ದಾರೆ. ಪಂಚಮಸಾಲಿ ಸಮಾಜದ ಮುಖಂಡ ಬಸನಗೌಡ ಪಾಟೀಲ ಯತ್ನಾಳರನ್ನು ರಾಜಕೀಯದಲ್ಲಿ ಹತ್ತಿಕ್ಕಲು ಯಡಿಯೂರಪ್ಪ ಕುತಂತ್ರದಿಂದ ಉಚ್ಚಾಟನೆ ಆದೇಶ ಹೊರಡಿಸಿದ್ದಾರೆ. ಆದೇಶ ಹಿಂಪಡೆಯದಿದ್ದರೆ ಪಂಚಮಸಾಲಿ ಸಮುದಾಯದಿಂದ ತೀವ್ರ ಹೋರಾಟ ನಡೆಸಲಾಗುವುದೆಂದರು.
ಪಕ್ಷದ ಬಲವರ್ಧನೆ ಹಾಗೂ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಬಹುದೊಡ್ಡ ಶಕ್ತಿ ತುಂಬಲು ಬಸನಗೌಡ ಪಾಟೀಲರ ಸೇವೆ ಅನನ್ಯ. ಇವರ ಉಚ್ಚಾಟನೆಯಿಂದ ಉತ್ತರ ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಹಾಗೂ ಮುಖಂಡರಿಗೆ ತೀವ್ರ ಘಾಸಿಯಾಗಿದೆ ಎಂದು ಮಾಜಿ ನಗರಾಧ್ಯಕ್ಷ ಸಂಜಯ ತೆಗ್ಗಿ ಬೇಸರ ಹೊರಹಾಕಿದರು.ಪಕ್ಷದ ಹೈಕಮಾಂಡ್ ಕೂಲಕುಂಶ ಪರಿಶೀಲಿಸಿ, ಮುಂದಿನ ಹಾನಿ ತಪ್ಪಿಸಬೇಕಾದರೆ ವಾಪಸ್ ಪಕ್ಷಕ್ಕೆ ಕರೆತಂದು ಪಕ್ಷದಲ್ಲಿ ಸಕ್ರಿಯಗೊಳಿಸಬೇಕು. ಇಲ್ಲವಾದಲ್ಲಿ ಪಕ್ಷದ ಭವಿಷ್ಯ ಸರಿಯಾಗಿರಲ್ಲವೆಂದರು.
ಮಹಾದೇವ ಧೂಪದಾಳ, ಸಂಜಯ ಸಿದ್ದಾಪೂರ, ಮಹಾದೇವ ಕೋಟ್ಯಾಳ, ವಿರುಪಾಕ್ಷಯ್ಯ ಮಠದ, ರವಿ ದೇಸಾಯಿ, ಪ್ರಶಾಂತ ಪಾಲಭಾಂವಿ, ಮಲ್ಲು ಹೊಸಮನಿ, ಯಮನಪ್ಪ ಕೋರಿ, ಬಸವರಾಜ ಮೂಡಲಗಿ, ಪ್ರಭು ಪೂಜಾರಿ, ಚನ್ನಪ್ಪ ಪಟ್ಟಣಶೆಟ್ಟಿ, ಚನಬಸು ಯರಗಟ್ಟಿ ಸೇರಿದಂತೆ ರಬಕವಿ-ಬನಹಟ್ಟಿ-ಮಹಾಲಿಂಗಪೂರ-ತೇರದಾಳ ಹಾಗು ಸುತ್ತಲಿನ ಗ್ರಾಮಗಳ ಕಾರ್ಯಕರ್ತರು ಉಪಸ್ಥಿತರಿದ್ದರು.