ಕೊಪ್ಪಳ: ಜಾತಿ ನಿಂದನೆ ಕೇಸ್‌ನ್ನು ಹಿಂಪಡೆಯುವಂತೆ ದೌರ್ಜನ್ಯ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಿಗ ರಕ್ಷಣೆ ವೇದಿಕೆ ಮತ್ತು ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಕೇಂದ್ರೀಯ ಬಸ್‌ ನಿಲ್ದಾಣದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.

ಕುಷ್ಟಗಿ ತಾಲೂಕಿನ ತಾವರಗೇರಾದ ಸಂತೋಷ ನಾಡಗೌಡ, ಸಿದ್ದನಗೌಡ, ಲಾಲಸಾಬ ಹುಲಿಯಾಪುರ, ವೆಂಕಟೇಶ ಕನಕಗಿರಿ, ಅಮರೇಶ ಕುಂಬಾರ ಎಂಬವರು ಅಟ್ರಾಸಿಟಿ ಕೇಸ್‌ ಹಿಂಪಡೆಯುವಂತೆ ದೌರ್ಜನ್ಯ ಮಾಡುತ್ತಿದ್ದಾರೆ. ತಾವರಗೇರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅರುಣಕುಮಾರಿ ಅವರ ಮೇಲೆ ದೌರ್ಜನ್ಯ ನಡೆದಿದ್ದರಿಂದ ತಾವರಗೇರಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಈ ಕುರಿತಂತೆ ದೂರನ್ನು ವಾಪಸ್‌ ಪಡೆಯುವಂತೆ ದಲಿತ ಪ್ರಾಧ್ಯಾಪಕಿಯ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಅಲ್ಲದೆ ಅವರಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅದೇ ರೀತಿಯಾಗಿ ಕೋನಸಾಗರದಲ್ಲಿ ಮನೆ ಸುಟ್ಟ ಆರೋಪಿಗಳನ್ನು ಈ ವರೆಗೂ ಪತ್ತೆಹಚ್ಚಿಲ್ಲ. ಕೊಪ್ಪಳ ತಾಲೂಕಿನ ಬಿ. ಹೊಸಳ್ಳಿ ಗ್ರಾಮದ ದಲಿತ ಯುವತಿ ನಾಪತ್ತೆಯಾಗಿದ್ದು, ಈ ವರೆಗೂ ಪತ್ತೆಯಾಗಿಲ್ಲ. ಕುಟುಂಬಸ್ಥರು ಪೊಲೀಸ್‌ ಠಾಣೆಗೆ ಅಲೆದಾಡಿ ಸುಸ್ತಾಗಿದ್ದಾರೆ. ಮಾನಸಿಕವಾಗಿ ನೊಂದಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಕೂಡಲೇ ಅಂಥವರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶೋಭಾ ಪೂಜಾರ, ಕರಿಯಪ್ಪ ಗುಡಿಮನಿ, ಚನ್ನಮ್ಮ ಜಾಲಗಾರ, ಗೌರಿ, ಕೆ. ದುರುಗೇಶ ಬರಗೂರು, ವಿರೂಪಾಕ್ಷಪ್ಪ ಮಂಗಳೂರು, ಗುರುರಾಜ, ಯಮನೂರಪ್ಪ, ಶಿವಕುಮಾರ, ಮುದುಕಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.