ಸಮರ್ಪಕ ವಿದ್ಯುತ್ ನೀಡಲಾರದ ಹಿನ್ನೆಲೆಯಲ್ಲಿ ರೈತರ ಜಮೀನಿನಲ್ಲಿರುವ ಬೆಳೆಗಳು ಒಣಗುತ್ತಿದ್ದು
ಕುಷ್ಟಗಿ: ಜೆಸ್ಕಾಂ ಅಧಿಕಾರಿಗಳು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ತಾಲೂಕಿನ ದೋಟಿಹಾಳ ಗ್ರಾಮದ ಕೆಇಬಿ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ರೈತಮುಖಂಡ ನಾಗನಗೌಡ ಗೌಡರ ಮಾತನಾಡಿ, ದೋಟಿಹಾಳ ವ್ಯಾಪ್ತಿಯಲ್ಲಿ ಬರುವ ಫ್ಯಾಕ್ಟರಿ, ಕೋಳಿ ಫಾರಂ ಸೇರಿದಂತೆ ಅನೇಕ ಕೆಲಸಗಳಿಗೆ ಸಮರ್ಪಕ ವಿದ್ಯುತ್ ಕೊಡುವ ದೋಟಿಹಾಳ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ರೈತರ ತೋಟಗಳಲ್ಲಿನ ಪಂಪ್ಸೆಟ್, ಮನೆಗಳಿಗೆ ವಿದ್ಯುತ್ ಸರಬರಾಜು ಮಾಡದೆ ರೈತರ ಜೀವದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹತ್ತಾರು ಗ್ರಾಮಗಳ ನೂರಾರು ರೈತರು ಜಮೀನಿನಲ್ಲಿ ಪಂಪ್ಸೆಟ್ ಹೊಂದಿದ್ದು, ಸಮರ್ಪಕ ವಿದ್ಯುತ್ ನೀಡಲಾರದ ಹಿನ್ನೆಲೆಯಲ್ಲಿ ರೈತರ ಜಮೀನಿನಲ್ಲಿರುವ ಬೆಳೆಗಳು ಒಣಗುತ್ತಿದ್ದು ಸರ್ಕಾರ ನಿಯಮದಂತೆ ರೈತರ ಪಂಪಸೆಟ್ಗಳಿಗೆ ದಿನಕ್ಕೆ ಏಳು ತಾಸು ಸಮರ್ಪಕ ವಿದ್ಯುತ್ ಒದಗಿಸಬೇಕು ಎಂದರು.
ಪದೇ ಪದೇ ದಿನಕ್ಕೆ ಹತ್ತಾರು ಸಲ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಮಾಡುವದು. ರಾತ್ರಿ ಹೊತ್ತು ಕೊಡುವ ವಿದ್ಯುತ್ ಬೆಳಗಿನ ಅವಧಿಯಲ್ಲಿ ಕೊಡಬೇಕು ರೈತಾಪಿ ವರ್ಗದವರು ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ತೋಟಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗದೆ ಇದ್ದಲ್ಲಿ ಬೆಳೆಗಳು ಹಾಳಾಗುತ್ತವೆ. ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಯಾಗಿ ವಿದ್ಯುತ್ ಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.ದೋಟಿಹಾಳ ಸ್ಟೇಷನ್ ವ್ಯಾಪ್ತಿಯ ಬಿಜಕಲ್, ಹೆಸರೂರು, ಕ್ಯಾದಿಗುಪ್ಪ, ದೋಟಿಹಾಳ ಹಾಗೂ ಕೇಸೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿನ ರೈತರ ಕಷ್ಟಗಳಿಗೆ ಸ್ಪಂದನೆ ಮಾಡಬೇಕು. ಕುಷ್ಟಗಿ ತಾಲೂಕಿನ ಜೆಸ್ಕಾಂ ಎಇಇ ಅಧಿಕಾರಿಗಳು ಪೋನ್ ಮಾಡಿದರೆ ಸ್ವೀಕರಿಸುವದಿಲ್ಲ ಎಂದ ಅವರು, ಸಮರ್ಪಕ ವಿದ್ಯುತ್ ಒದಗಿಸಬೇಕು ಇಲ್ಲವೆ ಮುಂದಿನ ದಿನಗಳಲ್ಲಿ ಕುಷ್ಟಗಿ ಎಇಇ ಕಚೇರಿ ಆವರಣದಲ್ಲಿ ಎಲ್ಲ ಗ್ರಾಮದ ರೈತರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾ ನಿರತ ರೈತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಯಮನೂರಪ್ಪ ಬಿಜಕಲ್, ದ್ಯಾಮಣ್ಣ ಬಿಜಕಲ್, ಬಸವರಾಜ ಜಗ್ಗಲ, ಹನಮಂತ ದೊಡ್ಡಮನಿ, ನಾಗರಾಜ ಕಾಟಾಪೂರು, ವೆಂಕಟೇಶ ಕಾಟಾಪೂರ, ಕುಂಟೆಪ್ಪ ತಳವಾರ ಸೇರಿದಂತೆ ಅನೇಕ ಗ್ರಾಮಗಳ ರೈತರು ಇದ್ದರು.ಪೊಲೀಸ್ ಅಧಿಕಾರಿಗಳ ಭೇಟಿ: ಪ್ರತಿಭಟನಾ ವಿಷಯ ತಿಳಿದುಕೊಂಡ ಕುಷ್ಟಗಿ ಪೊಲೀಸ್ ಠಾಣೆಯ ಎಎಸೈ ತಾಯಪ್ಪ ಭೇಟಿ ನೀಡಿ ರೈತರು ಮತ್ತು ಜೆಸ್ಕಾಂ ಅಧಿಕಾರಿಗಳ ಮನವೊಲಿಸುವ ಮೂಲಕ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿಕೊಂಡರು. ಇದೆ ಸಂದರ್ಭದಲ್ಲಿ ದೋಟಿಹಾಳ ಜೆಸ್ಕಾಂ ಎಸ್ಒ ಮಂಜುನಾಥ ಮಾತನಾಡಿ, ಕೆಲ ತೊಂದರೆಗಳಿಂದ ವಿದ್ಯುತ್ ಸರಬರಾಜು ಕೊಡುವಲ್ಲಿ ತೊಂದರೆಯಾಗಿದ್ದು ಪರ್ಯಾಯ ವ್ಯವಸ್ಥೆ ಕಂಡುಕೊಂಡು ಮುಂದಿನ ದಿನಗಳಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ರೈತರಿಗೆ ಮನವೊಲಿಸಿ ಮಾತನಾಡಿದರು. ರೈತರು ಪ್ರತಿಭಟನೆ ಹಿಂಪಡೆದು ಯಥಾಪ್ರಕಾರ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಉಂಟಾದಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ದೋಟಿಹಾಳ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ಇರುವ ತೋಟದಲ್ಲಿರುವ ಪಂಪಸೆಟ್ ಹಾಗೂ ಮನೆಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ ಈ ಕುರಿತು ಶಾಸಕ ದೊಡ್ಡನಗೌಡ ಪಾಟೀಲ ರೈತರ ಪೋನ್ ಕರೆಗಳಿಗೆ ಸ್ಪಂದಿಸಿ ಕೆಇಬಿ ಅಧಿಕಾರಿಗಳಿಗೆ ಬುದ್ದಿ ಹೇಳುವ ಮೂಲಕ ರೈತರಿಗೆ ಸಮರ್ಪಕ ವಿದ್ಯುತ್ ಕೊಡಿಸಲು ಮುಂದಾಗಬೇಕು ಎಂದು ಕೇಸೂರು ರೈತ ನಾಗನಗೌಡ ಗೌಡರ ತಿಳಿಸಿದ್ದಾರೆ.