ಕನ್ನಡಪ್ರಭ ವಾರ್ತೆ ಮಂಡ್ಯ

ಎಸ್‌ಇಪಿ ೫ ಮತ್ತು ೬ನೇ ಚತುರ್ಮಾಸದ ಐಚ್ಛಿಕ ಕನ್ನಡ ಪತ್ರಿಕೆಗಳ ಕಾರ್ಯಭಾರವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರು ಮತ್ತು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು.

ನಗರದ ಮಂಡ್ಯ ವಿಶ್ವವಿದ್ಯಾಲಯದ ಬಳಿ ಸೇರಿದ ಪ್ರತಿಭಟನಾಕಾರರು ಧರಣಿ ನಡೆಸಿ ನಂತರ ಕುಲಪತಿ ಪ್ರೊ.ಶಿವಚಿತ್ತಪ್ಪ ಅವರಿಗೆ ಮನವಿ ಸಲ್ಲಿಸಿದರು.

೨೦೨೬-೨೭ನೇ ಸಾಲಿಗೆ ಮಂಡ್ಯ ವಿಶ್ವವಿದ್ಯಾಲಯವು ೫ ಮತ್ತು ೬ನೇ ಚತುರ್ಮಾಸದ ಐಚ್ಛಿಕ ಕನ್ನಡ ಪತ್ರಿಕೆಗಳ ಕಾರ್ಯಭಾರವನ್ನು ಪ್ರಕಟಿಸಿದೆ. ಇದರಲ್ಲಿ ೨ ಡಿಎಸ್‌ಸಿ ಪತ್ರಿಕೆಗಳಿಗೆ ೪ ಕ್ರೆಡಿಟ್‌ಗೆ ೪ ಗಂಟೆಗಳ ಬೋಧನಾ ಅವಧಿ ಹಾಗೂ ಕಡ್ಡಾಯ ಕೌಶಲ ಪತ್ರಿಕೆಗೆ ೨ ಕ್ರೆಡಿಟ್‌ಗೆ ೨ಗಂಟೆಗಳ ಬೋಧನಾ ಅವಧಿ ಎಂದು ನಿಗದಿ ಮಾಡಿದೆ ಎಂದರು.

ಆದರೆ, ಪ್ರಥಮ ಬಿಎ ಮತ್ತು ದ್ವಿತೀಯ ಬಿಎ ಐಚ್ಛಿಕ ಕನ್ನಡ ಪತ್ರಿಕೆಗಳಿಗೆ ೫ ಕ್ರೆಡಿಟ್‌ಗೆ ೬ ಗಂಟೆಗಳ ಬೋಧನಾ ಅವಧಿ ನಿಗದಿಯಾಗಿದೆ. ಅದರಂತೆ ೫ ಮತ್ತು ೬ನೇ ಸೆಮಿಸ್ಟರ್‌ಗೂ ೪ ಕ್ರೆಡಿಟ್‌ಗೆ ೫ ಗಂಟೆಗಳ ಬೋಧನಾ ಅವಧಿ ಹಾಗೂ ಕಡ್ಡಾಯ ಕೌಶಲ ಪತ್ರಿಕೆಗೆ ೨ ಕ್ರೆಡಿಟ್‌ಗೆ ೩ ಗಂಟೆಗಳ ಬೋಧನಾ ಅವಧಿಗಳನ್ನು ನಿಗದಿ ಮಾಡಿ ಒಟ್ಟು ೧೩ ಗಂಟೆಗಳ ಬೋಧನಾ ಅವಧಿಯನ್ನು ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.


ಮಂಡ್ಯ ವಿವಿ ಇತರೆ ಮಾನವಿಕ ವಿಷಯಗಳಿಗೆ ೫ ಮತ್ತು ೬ನೇ ಸೆಮಿಸ್ಟರ್‌ಗೆ ೧೩ ಗಂಟೆಗಳ ಕಾರ್ಯಭಾರವನ್ನು ನಿಗದಿ ಮಾಡಿರುತ್ತದೆ. ಈ ಹಿನ್ನೆಲೆಯಲ್ಲಿ ಐಚ್ಛಿಕ ಕನ್ನಡ ೫ ಮತ್ತು ೬ನೇ ಸೆಮಿಸ್ಟರ್‌ಗಳಿಗೆ ೧೩ ಗಂಟೆಗಳ ಕಾರ್ಯಭಾರವನ್ನು ಹೆಚ್ಚಿಸಿಕೊಡಬೇಕು ಎಂದು ಆಗ್ರಹಿಸಿದರು.

ಮಂಡ್ಯ ವಿವಿ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಶಂಕರೇಗೌಡ ಎನ್.ಎಸ್, ಮುಖಂಡರಾದ ಡಾ.ಪ್ರತಿಮಾ, ನಾಗರಾಜು, ಪರಮೇಶ್, ಡಾ.ಬರಗೂರಪ್ಪ, ಡಾ.ಕೆ.ಪಿ.ಲೋಕೇಶ್, ಡಾ.ಜಯಕೀರ್ತಿ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಸೇರಿದಂತೆ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.