ಅಶ್ಲೀಲ ಗೀತೆ ಹಾಡುವ ಕಲಾವಿದರನ್ನು ಬ್ಯಾನ್ ಮಾಡಲು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ
ಕನ್ನಡಪ್ರಭ ವಾರ್ತೆ ವಿಜಯಪುರ
ಒಂದು ಕಾಲದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ನೋಡುವುದೆಂದರೆ ಸಂಗೀತ ಪ್ರಿಯರಿಗೆ ರಸದೌತಣವೇ ಸರಿ. ಆದರೆ ಇದೀಗ ನಿಜವಾದ ಸಂಗೀತದ ಆರಾಧಕರಿಗೆ ಸಿಡಿಲು ಬಡಿದ ಅನುಭವವಾಗುತ್ತಿದೆ ಎಂದು ಉತ್ತರ ಕರ್ನಾಟಕ ಕಲಾವಿದರ ರಕ್ಷಣೆ ಹಾಗೂ ಹೋರಾಟ ವೇದಿಕೆಯ ಶಕ್ತಿಕುಮಾರ ಹೇಳಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ಹಮ್ಮಿಕೊಂಡ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯಲ್ಲಿ, ಶಾಲೆಯ ವಾರ್ಷಿಕೋತ್ಸವದಲ್ಲಿ, ಮದುವೆ ಕಾರ್ಯಕ್ರಮದಲ್ಲಿ ಮುಂತಾದ ಶುಭ ಸಮಾರಂಭದಲ್ಲಿ ಇತ್ತೀಚಿಗೆ ಬಂದ ಕಲಾದವಿರು ಅಶ್ಲೀಲವಾಗಿ ಸಾಹಿತ್ಯ ರಚಿಸಿ ಹಾಡುವುದು, ಅಶ್ಲೀಲವಾಗಿ ನೃತ್ಯ ಮಾಡಿಸುವುದು ಮಾಡುತ್ತಿದ್ದಾರೆ. ಇಂತಹ ಹಾಡುಗಳನ್ನು ವೇದಿಕೆಯಲ್ಲಿ ಹಾಡುವರರನ್ನು ಮತ್ತು ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಾರ್ಯಕ್ರಮದ ಆಯೋಜಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡರು. ಜ.06 ರಂದು ಅಶ್ಲೀಲ ಗೀತೆ ಹಾಡುವ ಕಲಾವಿದರನ್ನು ಬ್ಯಾನ್ ಮಾಡಲು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಅಂದು ಎಲ್ಲಾ ಕಲಾವಿದರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ಹಿರಿಯ ಕಲಾವಿದ ವಿರೇಶ ವಾಲಿ ಮಾತನಾಡಿ, ಈಗಿನ ಕಲಾವಿದರು ಅಹಂಕಾರ ಮತ್ತು ಹಿರಿಯ ಕಲಾವಿದರಿಗೆ ಅವಾಚ್ಯವಾಗಿ ಮಾತನಾಡುವುದು, ಅಗೌರವ ತೋರಿಸುವುದರಿಂದ ಹಿರಿಯ ಕಲಾವಿದರಿಗೆ ಮುಜುಗರಕ್ಕೀಡಾಗುತ್ತಿದೆ. ಜಾನಪದ ಹೆಸರಿನಲ್ಲಿ ಯಾರಾದರೂ ಅಶ್ಲೀಲ ಸಾಹಿತ್ಯ ರಚಿಸಿ ಅಶ್ಲೀತೆ ಗೀತೆ ಹಾಡುವುದು ಮಾಡಿದರೆ, ಅವರ ವಿರುದ್ಧ ನಮ್ಮ ಸಂಘವು ಕಾನೂನು ಸಮರಕ್ಕೆ ಸಿದ್ಧವಾಗುತ್ತದೆ. ಮುಂಬರುವ ದಿನಗಳಲ್ಲಿ ಇಂತಹ ಕಲಾವಿದರ ವಿರುದ್ಧ ಪ್ರತಿ ಜಿಲ್ಲೆಯಲ್ಲಿಯೂ ಹೋರಾಟ ಹಮ್ಮಿಕೊಂಡು ಇವರನ್ನು ಕಾರ್ಯಕ್ರಮಕ್ಕೆ ಆಹ್ವಾನ ಕೋರದಂತೆ ಎಲ್ಲ ಹಿರಿಯ ಕಲಾವಿದರಿಗೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.ನ್ಯಾಯವಾದಿ ಗೌಸ ಹವಾಲ್ದಾರ ಮಾತನಾಡಿ, ಈಗಿನ ಜಾನಪದಕ್ಕೂ ಆಗಿನ ಜಾನಪದಕ್ಕೂ ತುಂಬಾ ವ್ಯತ್ಯಾಸವಿದೆ. ನವಯಗದ ಜಾನಪದ ದುಷ್ಪರಿಣಾಮ ಮೂಡುವ ಶೈಲಿಯಲ್ಲಿ ಜಾನಪದ ಗೀತೆಯನ್ನು ರಚಿಸುತ್ತಿರುವ ಕಲಾವಿದರನ್ನು ಎಚ್ಚರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಸಾಂಸ್ಕೃತಿ ಹಾಳು ಮಾಡುತ್ತಿರುವ ಕಲಾವಿದರ ಮೇಲೆ ಕನ್ನಡ ಪರ ಹೋರಾಟಗಾರರು ಎಚ್ಚೆತ್ತುಕೊಂಡು ಅವರ ವಿರುದ್ಧ ಕಾನೂನು ಸಮರ ಸಾರಬೇಕೆಂದು ಆಕ್ರೊಶ ವ್ಯಕ್ತಪಡಿಸಿದರು.
ರಾಘವ ಅಣ್ಣಿಗೇರಿ ಮಾತನಾಡಿ, ಹಿಂದು ಧರ್ಮಕ್ಕೆ ಇಂತಹ ಅಶ್ಲೀಲ ಅಪಚಾರ ಮಾಡುವಂತಹ ಯಾವುದೇ ರೀತಿಯ ಜಾನಪದಗೀತೆಗಳು, ವೇದಿಕೆಯ ಮೇಲೆ ಹಾಸ್ಯ ಮಾಡುವುದರಿಂದ ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಕೆಟ್ಟ ಪರಿಣಾಮ ಬೀರುತ್ತಿವೆ ಎಂದರು. ಜಾನಪದ ಅಕಾಡೆಮಿ ಖಜಾಂಚಿ ಮೇತ್ರಿ, ನ್ಯಾಯವಾದಿ ಮುನ್ನಾ ಬಿಜಾಪುರ, ಪ್ರಕಾಶ ಮಠ, ಪ್ರೇಮ ಚಲವಾದಿ, ವಿರೇಶ ವಾಲಿ, ಎಚ್.ಬಿ. ಪರೀಟ, ಮಾರುತಿ ಬೂದಿಹಾಳ, ಪರಶುರಾಮ ಭಜಂತ್ರಿ, ರಮೇಶ ಭಜಂತ್ರಿ, ಶಿವು ಭಜಂತ್ರಿ, ಭಾಷಾಖಾನ ಬಿಜಾಪುರ, ಸಿದ್ಧಾರ್ಥ ಬೈಚಬಾಳ, ದೇವುಕುಮಾರ, ಸುನೀಲ ಗುಡುಗುಂಟಿಮಠ ಸೇರಿ ಹಲವು ಕಲಾವಿದರು ಇದ್ದರು.