ಬಳ್ಳಾರಿ: ಜಿಲ್ಲೆಯ ಹೊಸ ಯರಗುಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಗೆ (ಕೆಪಿಎಸ್) ವಿಲೀನಗೊಳಿಸುವುದನ್ನು ವಿರೋಧಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಸರ್ಕಾರಿ ಶಾಲೆ ಮುಚ್ಚಿದಲ್ಲಿ ನೂರಾರು ತಳ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿರಾಗುತ್ತಾರೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯು ಸರ್ಕಾರಿ ಶಾಲೆ ಮುಚ್ಚುವ ಹುನ್ನಾರದ ಯೋಜನೆಯಾಗಿದೆ. ರಾಜ್ಯ ಸರ್ಕಾರ ಜನರ ತೀವ್ರ ವಿರೋಧದ ನಡುವೆಯೂ ಈ ಯೋಜನೆ ಅನುಷ್ಠಾನಕ್ಕೆ ತಂದು, ಬಡವರ ಮಕ್ಕಳ ಶಾಲೆ ಮುಚ್ಚಲು ಮುಂದಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಹೊಸ ಯರಗುಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಹ ಶಾಲೆ ಮುಚ್ಚುವುದು ಹೀನ ಕೃತ್ಯವಾಗಿದೆ. ಈ ಶಾಲೆಗೆ ಅಗತ್ಯ ಕಟ್ಟಡ ಸಂಖ್ಯೆ ಹೆಚ್ಚಿಸಿ, ಶಿಕ್ಷಕರ ನೇಮಕ ಮಾಡಿ, ಉತ್ತಮ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕು.

ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಬದಲು ಶಾಲೆಗಳನ್ನು ಒಂದಾಗಿಸುವ ಕ್ರಮ ಸರ್ಕಾರ ಕೈಗೊಂಡರೆ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಸರ್ಕಾರ ತನ್ನ ಮೊಂಡುತನ ಮುಂದುವರಿಸಿ ಸರ್ಕಾರಿ ಮುಚ್ಚುವ ನಿಲುವು ಕೈಗೊಂಡರೆ ಪೋಷಕರು ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸಬೇಕಾಗುವುದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಗುರಳ್ಳಿ ರಾಜ ಅವರು ಎಚ್ಚರಿಸಿದರು.

ಸರ್ಕಾರಿ ಶಾಲೆ ಮುಚ್ಚದಂತೆ ಒತ್ತಾಯಿಸಿ ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು “ಸರ್ಕಾರಿ ಶಾಲೆ ಉಳಿಸಿ”, “ಗ್ರಾಮೀಣ ಶಿಕ್ಷಣ ಕಾಪಾಡಿ”, “ಕೆಪಿಎಸ್ ನೀತಿ ಹಿಂಪಡೆಯಿರಿ” ಎಂಬ ಘೋಷಣೆಗಳನ್ನು ಕೂಗಿದರು. ಶಾಲೆಯ ಮುಖ್ಯ ಶಿಕ್ಷಕರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಕಳುಹಿಸಿಕೊಡಲಾಯಿತು. ಗ್ರಾಮದ ಮುಖಂಡರಾದ ಘನ ಮಲ್ಲಿಕಾರ್ಜುನ, ಸುಂಕಣ್ಣ, ವೀರೇಶ್, ಶಿವಶಂಕರ್, ವೀರೇಶ್, ಸಿದ್ದಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.