ಚರಂಡಿ ಸ್ಲ್ಯಾಬ್‌, ಫುಟ್‌ಪಾತ್‌ ನಿರ್ಮಾಣ ಒತ್ತಾಯಿಸಿ ಪ್ರತಿಭಟನೆ

| Published : Mar 01 2025, 01:03 AM IST

ಸಾರಾಂಶ

ಗೋಳಿತ್ತೊಟ್ಟು ಜಂಕ್ಷನ್‌ನಿಂದ ಗೋಳಿತ್ತೊಟ್ಟು ಸರ್ಕಾರಿ ಉ.ಹಿ.ಪ್ರಾ.ಶಾಲೆಯ ತನಕದ ಚರಂಡಿಗೆ ಸ್ಲ್ಯಾಬ್‌ ಅಳವಡಿಸುವಂತೆ ಹಾಗೂ ಫುಟ್‌ಪಾತ್ ನಿರ್ಮಾಣಕ್ಕೆ ಒತ್ತಾಯಿಸಿ ಗೋಳಿತ್ತೊಟ್ಟು ಸರ್ಕಾರಿ ಉ.ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳು, ಆಟೋ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ಶುಕ್ರವಾರ ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ರಾಷ್ಟ್ರೀಯ ಹೆದ್ದಾರಿ ೭೫ರ ಗೋಳಿತ್ತೊಟ್ಟು ಜಂಕ್ಷನ್‌ನಿಂದ ಗೋಳಿತ್ತೊಟ್ಟು ಸರ್ಕಾರಿ ಉ.ಹಿ.ಪ್ರಾ.ಶಾಲೆಯ ತನಕದ ಚರಂಡಿಗೆ ಸ್ಲ್ಯಾಬ್‌ ಅಳವಡಿಸುವಂತೆ ಹಾಗೂ ಫುಟ್‌ಪಾತ್ ನಿರ್ಮಾಣಕ್ಕೆ ಒತ್ತಾಯಿಸಿ ಗೋಳಿತ್ತೊಟ್ಟು ಸರ್ಕಾರಿ ಉ.ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳು, ಆಟೋ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ಶುಕ್ರವಾರ ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಗೋಳಿತ್ತೊಟ್ಟು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಮುಗಿದಿದ್ದರೂ ಹೆದ್ದಾರಿ ಬದಿಯ ಚರಂಡಿಗೆ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸಿಲ್ಲ. ಇಲ್ಲಿ ಸಮರ್ಪಕ ಫುಟ್‌ಪಾತ್‌ನ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಗೋಳಿತ್ತೊಟ್ಟು ಸರ್ಕಾರಿ ಉ.ಹಿ.ಪ್ರಾ.ಶಾಲೆಗೆ ಹೋಗುವ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯ ಕಾಂಕ್ರಿಟ್ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಕೆಲವೊಮ್ಮೆ ಘನ ವಾಹನಗಳೂ ಹೆದ್ದಾರಿ ಬದಿಯಲ್ಲಿಯೇ ನಿಂತಿರುವುದರಿಂದ ಮಕ್ಕಳು ನಡು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗುತ್ತದೆ ಎಂದು ಗಮನ ಸೆಳೆಯಲಾಯಿತು.ಚರಂಡಿಗೆ ಕಾಂಕ್ರಿಟ್ ಸ್ಲ್ಯಾಬ್ ಅಳವಡಿಸಿದ್ದಲ್ಲಿ ಮಕ್ಕಳಿಗೆ ನಡೆದುಕೊಂಡು ಬರಲು ಅನುಕೂಲವಾಗಲಿದೆ. ಈ ಬಗ್ಗೆ ಗಮನ ಹರಿಸಿ ಚರಂಡಿಗೆ ಸ್ಲ್ಯಾಬ್ ಅಳವಡಿಸಲು ಹಾಗೂ ಸಮರ್ಪಕ ಫುಟ್‌ಪಾತ್ ನಿರ್ಮಾಣಕ್ಕೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಜ.೨೭ರಂದು ನಡೆದ ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಒತ್ತಾಯದಂತೆ ಜಿಲ್ಲಾಧಿಕಾರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಗಿತ್ತು. ಮೂರು ದಿನದೊಳಗೆ ಸ್ಪಂದಿಸದೆ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು.

ಗ್ರಾಮಸಭೆ ಕಳೆದು ೧ ತಿಂಗಳು ಆದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಹಿನ್ನೆಲೆಯಲ್ಲಿ ಫೆ.೨೮ರಂದು ಗ್ರಾಮಸ್ಥರು ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು, ಆಟೋ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ವಾರದೊಳಗೆ ಚರಂಡಿಗೆ ಸ್ಲ್ಯಾಬ್ ಅಳವಡಿಸಲು ಹಾಗೂ ಸಮರ್ಪಕ ಫುಟ್ ಪಾತ್ ನಿರ್ಮಾಣಕ್ಕೆ ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಸಾಮಾಜಿಕ ಕಾರ್ಯಕರ್ತ ಕೆ.ಕೆ.ಇಸ್ಮಾಯಿಲ್ ಕೋಲ್ಪೆ ಮಾತನಾಡಿದರು. ವಿದ್ಯಾರ್ಥಿಗಳ ಜೊತೆಗೆ ಗ್ರಾಮಸ್ಥರಾದ ಅಬ್ದುಲ್ಲಾ ಕುಂಞಿ ಕೊಂಕೋಡಿ, ಕಿರಣ್ ಡೆಬ್ಬೇಲಿ, ತೀರ್ಥೇಶ್ ಡೆಬ್ಬೇಲಿ, ಅಬ್ದುಲ್ ರಜಾಕ್ ಸಮರಗುಂಡಿ, ಪದ್ಮ ಗೋಳಿತ್ತೊಟ್ಟು, ಗಗನ್ ಗೋಳಿತ್ತೊಟ್ಟು, ಯತೀಂದ್ರ ಗೋಳಿತ್ತೊಟ್ಟು, ಸುರೇಶ್ ಗೋಳಿತ್ತೊಟ್ಟು, ಬೆಳಿಯಪ್ಪ ಗೌಡ ಗೋಳಿತ್ತೊಟ್ಟು, ಚಂದ್ರಶೇಖರ ಶೆಟ್ಟಿ ಪೆರಣ, ಪಾರ್ಶ್ವನಾಥ ಜೈನ್ ಗೋಳಿತ್ತೊಟ್ಟು, ವಿಶ್ವನಾಥ ಪೆರ್ನಾರು, ಹನೀಫ್ ಮರ್ಲಾಪು, ವೆಂಕಪ್ಪ ಪೂಜಾರಿ ಗೋಳಿತ್ತೊಟ್ಟು, ವೀರಪ್ಪ ಪೂಜಾರಿ ಅಂಬರ್ಜೆ, ಬೈಜು ಅಂಬುಡೇಲು, ವಾಮನ ಗೌಡ ತಿರ್ಲೆ, ಚಂದ್ರಶೇಖರ ತಿರ್ಲೆ, ಅಬೂಬಕ್ಕರ್ ಸಿದ್ದೀಕ್ ಗೋಳಿತ್ತೊಟ್ಟು, ಹನೀಫ್ ಕೊಂಕೋಡಿ, ಸಾದಿಕ್ ಗೋಳಿತ್ತೊಟ್ಟು, ಖಾದರ್ ಕೊಂಕೋಡಿ ಮತ್ತಿತರರು ಇದ್ದರು.