ಹೊಸಪೇಟೆ: ಮಾಜಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ನಗರದ ಮುಸ್ಲಿಂ ಸಮುದಾಯದ ವತಿಯಿಂದ ಶುಕ್ರವಾರ ಡಾ.ಪುನೀತ್ ರಾಜಕುಮಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಮೊಹಮದ್ ಇಮಾಮ್ ನಿಯಾಜಿ ಮಾತನಾಡಿ, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿದೆ. ಕೆಲ ಕಿಡಿಗೇಡಿಗೇಳು ಅವರ ವಿರುದ್ಧ ಆಡಿಯೋ ಸಂಭಾಷಣೆ ಹರಿಬಿಟ್ಟು, ರಾಜಕೀಯವಾಗಿ ಅವರನ್ನು ಮುಗಿಸುವ ಷಡ್ಯಂತ್ರ ಮಾಡಿದ್ದಾರೆ. ಈ ಕಾರಣದಿಂದ ಇಂದು ಅವರಿಗೆ ಮಂತ್ರಿಸ್ಥಾನ ಸಿಗದಂತಾಗಿದೆ. ಜಮೀರ್‌ ಅಹಮದ್‌ ಖಾನ್‌ ಕಾಂಗ್ರೆಸ್‌ ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸುವ ಮೂಲಕ ಎಲ್ಲ ಜಾತಿ-ಜನಾಂಗದವರ ಪ್ರೀತಿ ಗಳಿಸಿದ್ದಾರೆ ಎಂದರು.

ಜಮೀರ್ ಕಳೆದ 10 ವರ್ಷಗಳಿಂದಲೂ ಪಕ್ಷಕ್ಕಾಗಿ ನಿರಂತರವಾಗಿ ದುಡಿದಿದ್ದಾರೆ; ದುಡಿಯುತ್ತಿದ್ದಾರೆ. ಅವರು ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತರಾಗಿ ಉಳಿದಿಲ್ಲ. ಎಲ್ಲ ವರ್ಗದ ಬಡವರಿಗೆ ಅವರು ಸಹಾಯ ಮಾಡಿದ್ದಾರೆ. ಸರ್ವ ಜನಾಂಗದ ನಾಯಕರಾಗಿರುವ ಜಮೀರ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಪಕ್ಕಕ್ಕೆ ದೊಡ್ಡ ನಷ್ಟವಾಗಲಿದೆ ಎಂದರು.

ಮುಸ್ಲಿಂ ಸಮಾಜದ ಮುಖಂಡರಾದ ಫಿರೋಜ್ ಖಾನ್, ಎಂ.ಎಂ. ಗೌಸ್, ಕೊತ್ವಲ್‌ ಮೊಸೀನ್, ಡಾ.ದರ್ವೇಶ, ಅನ್ಸರ್ ಬಾಷಾ, ಅಯತ್ ರಸೂಲ್, ದಾದಾಪೀರ್, ಎನ್.ಎಸ್. ರಫೀಕ್, ಸೈಯದ್ ಬುಡೇನ್, ಜಾವೀದ್, ಹುಸೇನ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 5ಎಚ್‌ಪಿಟಿ5

ಹೊಸಪೇಟೆ ನಗರದಲ್ಲಿ ಶುಕ್ರವಾರ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.