ಮಹಾಲಿಂಗಪುರ ನೂತನ ತಾಲೂಕು ರಚನೆಗೆ ಆಗ್ರಹಿಸಿ ತಾಲೂಕು ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ೧೫೦೦ ದಿವಸಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಅಸಡ್ಡೆ ತೋರುತ್ತಿರುವ ಸರ್ಕಾರದ ನಡೆ ಖಂಡಿಸಿ ಸೋಮವಾರ ಹೋರಾಟಗಾರರು ಚನ್ನಮ್ಮ ವೃತ್ತದಲ್ಲಿ ಸೇರಿ, ಕೆಲಕಾಲ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರ ಶೀಘ್ರ ತಾಲೂಕು ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ನೂತನ ತಾಲೂಕು ರಚನೆಗೆ ಆಗ್ರಹಿಸಿ ತಾಲೂಕು ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ೧೫೦೦ ದಿವಸಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಅಸಡ್ಡೆ ತೋರುತ್ತಿರುವ ಸರ್ಕಾರದ ನಡೆ ಖಂಡಿಸಿ ಸೋಮವಾರ ಹೋರಾಟಗಾರರು ಚನ್ನಮ್ಮ ವೃತ್ತದಲ್ಲಿ ಸೇರಿ, ಕೆಲಕಾಲ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರ ಶೀಘ್ರ ತಾಲೂಕು ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದರು.ನಂತರ ತಹಶೀಲ್ದಾರ ಗಿರೀಶ ಸ್ವಾದಿ ಮಾತನಾಡಿ, ನಮ್ಮ ಮೇಲಧಿಕಾರಿಗಳ ಆದೇಶದಂತೆ ಮಹಾಲಿಂಗಪುರ ನೂತನ ತಾಲೂಕಿಗೆ ಅಗತ್ಯವಿರುವ ಹಳ್ಳಿಗಳು ಹಾಗೂ ಅವುಗಳ ಸುತ್ತಮುತ್ತಲಿನ ಭೌಗೋಳಿಕ ಹಿನ್ನೆಲೆಯನ್ನು ನಾವು ಈಗಾಗಲೇ ಸರ್ಕಾರದ ಕಂದಾಯ ಇಲಾಖೆಗೆ ಸಲ್ಲಿಸಿದ್ದೇವೆ. ಇನ್ನು ಮುಂದಿನ ಕಾರ್ಯ ಸರ್ಕಾರದ ಮಟ್ಟದಲ್ಲಿದೆ ಎಂದರು.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ್ ಹಲಗಿಗೌಡರ, ರೈತ ಮುಖಂಡ ಗಂಗಾಧರ ಮೇಟಿ ಮಾತನಾಡಿ, ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಮುಖಂಡರು, ಸಾರ್ವಜನಿಕರು ಸೇರಿ ಚಾತಕ ಪಕ್ಷಿಯಂತೆ ಕಾಯುತ್ತಾ ಮಹಾಲಿಂಗಪುರ ನೂತನ ತಾಲೂಕಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಮುಖ್ಯಮಂತ್ರಿಗಳು ಹೋರಾಟಕ್ಕೆ ಬೆಲೆ ನೀಡಿ ಆದಷ್ಟು ಬೇಗ ಮಹಾಲಿಂಗಪುರ ನೂತನ ತಾಲೂಕು ಘೋಷಣೆ ಮಾಡಿ ದೇಶದ ಸಂವಿಧಾನದ ಘನತೆ ಗೌರವ ಎತ್ತಿ ಹಿಡಿಯಬೇಕೆಂದು ಆಗ್ರಹಿಸಿದರು.ಪಟ್ಟಣದ ಪಿಕೆಪಿಎಸ್ ಜಾಗದಲ್ಲಿ ಹಾಕಿದ ತಾಲೂಕು ಹೋರಾಟ ವೇದಿಕೆಯಿಂದ ಚನ್ನಮ್ಮ ವೃತ್ತದವರೆಗೆ ಘೋಷಣೆಗಳನ್ನು ಕೂಗುತ್ತ ಕಾಲ್ನಡಿಗೆಯಲ್ಲಿ ಆಗಮಿಸಿದ ಹೋರಾಟಗಾರರು ತಹಶೀಲ್ದಾರಗೆ ಮನವಿ ಸಲ್ಲಿಸಿದರು.
ಪರಪ್ಪ ಬ್ಯಾಕೋಡ, ನಿಂಗಪ್ಪ ಬಾಳಿಕಾಯಿ, ಚನ್ನು ದೇಸಾಯಿ, ಹಣ್ಮಂತ ಜಮಾದಾರ, ಸಿದ್ದು ಶಿರೋಳ, ಭೀಮಶಿ ಸಸಾಲಟ್ಟಿ, ವೀರೇಶ ಆಸಂಗಿ, ದುಂಡಪ್ಪ ಜಾಧವ, ರಫೀಕ್ ಮಾಲದಾರ, ನ್ಯಾ.ಎಂ.ಕೆ. ಸಂಗಣ್ಣವರ, ದುಂಡಪ್ಪ ಇಟ್ನಾಳ, ಮಹಾಲಿಂಗಯ್ಯ ಅವರಾದಿ, ಕರೆಪ್ಪ ಮೇಟಿ, ಹಾದಿಮನಿ, ಶಂಕರ ಸೈದಾಪುರ, ಮಹಮ್ಮದ ಪೆಂಡಾರಿ, ಮಹಾದೇವ ಉತ್ತೂರ, ರೆಹಮಾನ್ ಲಕ್ಕುಂಡಿ, ಸುನೀಲ ಮೇಟಿ, ಪ್ರಭುಲಿಂಗ ಕಲ್ಮಠ, ಶಂಕರ ಹುಕ್ಕೇರಿ, ಗಿರೀಶ ಜಮಖಂಡಿ, ಸುಭಾಸ್ ಜಂಬಗಿ ಇತರರು ಇದ್ದರು.