ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಬಾಂಗ್ಲಾ ದೇಶದವರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರವೇ ವಸತಿ ಒದಗಿಸಿದೆ. ಆದರೆ ಅಂದು ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದು ಕರವೇ ಪ್ರವೀಣ್ ಶೆಟ್ಟಿ ಬಣ ಮಾತ್ರ ಎಂದು ಕರವೇ ಪ್ರವೀಣ್‌ ಶೆಟ್ಟಿ ಬಣದ ಕೊಡಗು ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್‌ ಹೇಳಿದರು.

ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು, ಅಕ್ರಮ ವಲಸಿಗರಿಗೆ ಆಶ್ರಯ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಿಂದ ಮಡಿಕೇರಿ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣದ ಮೂಲಕ ಜೇಸಿ ವೇದಿಕೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.ತೋಟದ ಮಾಲೀಕರ ಮೇಲೆ ಹಲ್ಲೆ ಆರೋಪ: ಜೇಸಿ ವೇದಿಕೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್, ಅಕ್ರಮ ಬಾಂಗ್ಲಾ ವಲಸಿಗರು ಅಸ್ಸಾಮಿಗರ ಸೋಗಿನಲ್ಲಿ ರಾಜ್ಯದಲ್ಲಿ ನೆಲೆಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಕಾರ್ಮಿಕರ ಬದುಕು ಬೀದಿಗೆ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಲಸಿಗರು ಇತ್ತೀಚೆಗಷ್ಟೇ ಶಾಂತಳ್ಳಿಯಲ್ಲಿ ಆಟೋ ಚಾಲಕನಿಗೆ ತೀವ್ರ ಹಲ್ಲೆ ನಡೆಸಿದ್ದಾರೆ. ಅಸ್ಸಾಮಿಗರು ಬರುವುದಕ್ಕಿಂತ ಮುಂಚೆ ತೋಟಗಳಲ್ಲಿ ಸ್ಥಳೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಾಲೀಕರಿಗೆ ನಿಯತ್ತಾಗಿದ್ದರು. ಇದೀಗ ಅಸ್ಸಾಮಿಗರು ತೋಟದ ಮಾಲೀಕರುಗಳ ಮೇಲೆಯೇ ಹಲ್ಲೆ ನಡೆಸುತ್ತಿದ್ದಾರೆ. ಎಲ್ಲೆಡೆ ಅಸ್ಸಾಮಿಗರು ತುಂಬಿದ್ದಾರೆ. ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ತೋಟ ಮಾಲೀಕರಿಗೂ ಭದ್ರತೆ ಇರುವುದಿಲ್ಲ ಎಂದು ಎಚ್ಚರಿಸಿದರು.ಆಧಾರ್‌ ಪರಿಶೀಲಿಸಿ: ಕಾನೂನು ಸಲಹೆಗಾರ ಕಾಟ್ನಮನೆ ವಿಠಲ್ ಗೌಡ ಮಾತನಾಡಿ, ಅಕ್ರಮ ಬಾಂಗ್ಲಾ ವಲಸಿಗರು ಕೇವಲ ಕೊಡಗಿನ ಸಮಸ್ಯೆಯಲ್ಲ. ಇಡೀ ಭಾರತ ದೇಶದ ಸಮಗ್ರತೆಯ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕೆಂದರು. ಇತ್ತೀಚೆಗೆ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹಲವಷ್ಟು ಮಂದಿ ನುಸುಳುಕೋರರು ಸಿಕ್ಕಿಬೀಳುತ್ತಿದ್ದಾರೆ. ಮತದಾರರ ಪಟ್ಟಿಯೊಂದಿಗೆ ಆಧಾರ್ ಕಾರ್ಡ್ಗಳನ್ನೂ ಸಹ ಪರಿಶೀಲಿಸಬೇಕು. ರಾಜ್ಯಮಟ್ಟದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಬೇಕು ಎಂದರು. ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ ಮಾತನಾಡಿ, ಪ್ರತಿಭಟನಾ ಸಭೆಗೆ ಅನುಮತಿ ಪಡೆಯಲು ತೆರಳಿದ ಸಂದರ್ಭ, ಬಾಂಗ್ಲಾದವರು ಎಲ್ಲಿದ್ದಾರೆ? ಎಂದು ಪೊಲೀಸ್ ಅಧಿಕಾರಿಯೋರ್ವರು ಕರವೇ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ. ನಾವೇ ಬಾಂಗ್ಲಾದವರನ್ನು ಪತ್ತೆಹಚ್ಚುವುದಾರೆ ಪೊಲೀಸ್ ವ್ಯವಸ್ಥೆ ಯಾಕೆ ಬೇಕು? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ೨೦ ಲಕ್ಷ ಬಾಂಗ್ಲಾ ವಲಸಿಗರಿದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಸಿಕ್ಕಿದೆ. ಶಾಸಕ ಡಾ. ಮಂತರ್ ಗೌಡ ಅವರೂ ಸಹ ಸದನದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ಕ್ರಮಕೈಗೊಂಡಿದೆ ಎಂಬುದೂ ತಿಳಿಯಬೇಕು ಎಂದರು.ಅರೆಸೇನಾ ಪಡೆಯ ಜಿಲ್ಲಾಧ್ಯಕ್ಷ ರಮೇಶ್ ಮಾತನಾಡಿ, ಇದೀಗ ಎಲ್ಲೆಡೆ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸುತ್ತಿದ್ದಾರೆ. ಕೊಡಗಿನ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಜಾಗೃತಗೊಳ್ಳಬೇಕು ಎಂದರು. ಸಭೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡ ಹೆಚ್.ಎಂ. ಸೋಮಪ್ಪ, ನಿರ್ವಾಣಪ್ಪ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ಕರವೇ ಯುವ ಘಟಕದ ಅಧ್ಯಕ್ಷ ವಸಂತ್ ಆಚಾರ್ಯ, ತಾಲೂಕು ಅಧ್ಯಕ್ಷ ರೋಹಿತ್ ಗೌಡ, ಸೋಮವಾರಪೇಟೆ ನಗರ ಘಟಕದ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಮಿಕ ಘಟಕದ ಅಧ್ಯಕ್ಷ ದುರ್ಗೇಶ್, ಕೆ.ಪಿ. ರವೀಶ್, ಅಬ್ಬಾಸ್, ಮಹಿಳಾ ಘಟಕದ ವೇದಾವತಿ, ಶೃತಿ, ಲತಾ, ಸೇರಿದಂತೆ ಇತರರು ಇದ್ದರು.

ಕರವೇ ಸಂಘಟನೆಯ ನೂರಾರು ಮಂದಿ ಕಾರ್ಯಕರ್ತರು, ನಿವೃತ್ತ ಜಿಲ್ಲಾ ಅರೆಸೇನಾ ಪಡೆಯ ಪದಾಧಿಕಾರಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.