ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ ಜಮೀನಿನ ವಿಚಾರದ ವಿವಾದಕ್ಕೆ ಸಂಬಂಧಪಟ್ಟಂತೆ ದೂರು ಸಲ್ಲಿಸಲು ಠಾಣೆಗೆ ತೆರಳಿದ್ದ ವೇಳೆ ತಾಲೂಕಿನ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಡಿವೈಎಸ್ಪಿ ರಾಮಚಂದ್ರಪ್ಪ ವರ್ತನೆ ಖಂಡಿಸಿ ಶನಿವಾರ ಇಲ್ಲಿನ ರೈತ, ದಲಿತ ಹಾಗೂ ಮಹಿಳಾ ಸಂಘಟನೆಗಳ ವತಿಯಿಂದ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಮಧುಗಿರಿ ಡಿವೈಎಸ್ಪಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದ ಸಂಘಟನೆಗಳು ಪಟ್ಟಣದ ಚಳ್ಳಕರೆ ರಸ್ತೆ ಮಾರ್ಗದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು. ಇದೇ ರಸ್ತೆ ಮಾರ್ಗದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದ ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ತಾಲೂಕಿನ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಸುಶೀಲಮ್ಮ ಮಾತನಾಡಿ, ಜಮೀನಿನ ವಿವಾದದ ದೂರಿಗೆ ಸಂಬಂಧಪಟ್ಟಂತೆ ತಾಲೂಕಿನ ರೈತ ಮಹಿಳೆಯೊಬ್ಬರು ಮಧುಗಿರಿ ಡಿವೈಎಸ್ಪಿ ಕಚೇರಿಗೆ ತೆರಳಿ ಮನವಿ ಮಾಡುತ್ತಿದ್ದ ವೇಳೆ ಡಿವೈಎಸ್ಪಿ ರಾಮಚಂದ್ರಪ್ಪ ಮಹಿಳೆ ಜೂತೆ ಅಸಭ್ಯ ವರ್ತಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಕರ್ತವ್ಯನಿರತ ಅಧಿಕಾರಿ ಲೈಂಗಿಕ ದೌರ್ಜನ್ಯ ವೆಸಗಿದ್ದು ಇಡೀ ಪೊಲೀಸ್ ಇಲಾಖೆಯ ತಲೆ ತಗ್ಗಿಸುವಂತಿದೆ. ನೊಂದ ಮಹಿಳೆಯರಿಗೆ ರಕ್ಷಣೆ ಕಲ್ಲಿಸಿದ ಬೇಕಾದ ದೊಡ್ಡ ಅಧಿಕಾರಿಗಳು ದಡ್ಡರಾಗಿ ವರ್ತಿಸಿದರೆ ಹೇಗೆ? ಬೇಲಿಯೇ ಎದ್ದು ಹೊಲ ಮೇಯುವ ಸ್ಥಿತಿ ತಲುಪಿದಂತಿದೆ. ಇದು ನಾಚಿಕೇಡಿನ ವರ್ತನೆ ಇಂತಹ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾಗೊಳಿಸುವಂತೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಸರ್ಕಾರಕ್ಕೆ ಆಗ್ರಹಿಸಿದರು.ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ಶಿವಗಂಗಮ್ಮ, ತಾಲೂಕಿನ ಸ್ತ್ರಿ ಶಕ್ತಿ ಮಹಿಳಾ ಸಂಘಟನೆಯ ಉಪಾಧ್ಯಕ್ಷರಾದ ಅಂಬಿಕಾ ರಮೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ , ಸಮಾಜಿಕ ಹೋರಾಟಗಾರ ಕೃಷ್ಣಮೂರ್ತಿ ಮಾತನಾಡಿದರು. ಈ ವೇಳೆ ಸಂಘಟನೆಗಳ ಮುಖಂಡರಾದ ಬೇಕರಿ ನಾಗರಾಜು,ತಾಳೇ ಮರದಹಳ್ಳಿ ಗೋವಿಂದಪ್ಪ, ದಲಿತ ಮುಖಂಡ ಕಿರ್ಲಾಲಹಳ್ಳಿಯ ಈರಣ್ಣ, ಮಹಿಳಾ ಸಂಘಟನೆಗಳ ಮುಖ್ಯಸ್ಥರಾದ ನಾಗಲಕ್ಷ್ಮಿ, ಬಿ.ಕೆ.ಹಳ್ಳಿ ಅಲವೇಲಮ್ಮ, ವರಲಕ್ಷ್ಮಿ, ಹನುಮಕ್ಕ, ಸುನಂದಾ,ರತ್ನಮ್ಮ, ರೈತ ಸಂಘದ ತಾ,ಅಧ್ಯಕ್ಷ ಬ್ಯಾಡನೂರು ಶಿವು,ರಾಮಾಂಜಿನಪ್ಪ, ಸದಾಶಿವಪ್ಪ, ತಿಪ್ಪೇಸ್ವಾಮಿ, ನರಸಿಂಹಮೂರ್ತಿ ಇತರರು ಭಾಗವಹಿಸಿದ್ದರು.