ಸಾರಾಂಶ
ಶಿರಹಟ್ಟಿ: ರಣತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಿಹಾಳ ಹಾಗೂ ರಣತೂರ ಗ್ರಾಮದ ಸುಮಾರು ೫೦ಕ್ಕೂ ಹೆಚ್ಚು ರೈತರು ಸಾಲ ಮಾಡಿ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ(ದೊಡ್ಡಿ) ನಿರ್ಮಿಸಿ ವರ್ಷ ಕಳೆದರೂ ಫಲಾನುಭವಿಗಳಿಗೆ ಹಣ ನೀಡದೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತಾಯಿಸುತ್ತಿದ್ದಾರೆ ಎಂದು ರೈತರು ಜಾನುವಾರುಗಳೊಂದಿಗೆ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.ಸಾಲ ಕೊಟ್ಟವರ ಕಿರುಕುಳ ತಾಳದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಮಂಗಳವಾರ ದಿಢೀರ್ ರಣತೂರ ಗ್ರಾಮ ಪಂಚಾಯಿತಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಫಲಾನುಭವಿ ರೈತರಾದ ಬಸವರಾಜ ವಡವಿ, ಮಂಜು ಹನುಮಗೌಡ್ರ, ಸಂಜೀವ ಹಂಗನಕಟ್ಟಿ ಮಾತನಾಡಿ, ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡ ಎಲ್ಲ ವರ್ಗದವರಿಗೂ ₹೫೭ ಸಾವಿರ ನೇರ ಫಲಾನುಭವಿ ರೈತರ ಖಾತೆಗೆ ಜಮೆ ಮಾಡಬೇಕಿದ್ದು, ವರ್ಷ ಕಳೆದರೂ ರೈತರಿಗೆ ಹಣ ನೀಡುತ್ತಿಲ್ಲ. ಕೇಳಿದರೆ ಅನುದಾನ ಬಂದಿಲ್ಲ. ಮೇಲಧಿಕಾರಿಗಳನ್ನು ಕೇಳಿಕೊಳ್ಳಿ ಎಂದು ಪಿಡಿಒ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಕಳೆದ ಎರಡು ತಿಂಗಳ ಹಿಂದೆ ಗ್ರಾಮ ಸಭೆ ನಡೆಸಿದ್ದು, ಆ ಸಭೆಯಲ್ಲಿ ಭರವಸೆ ನೀಡಿದಂತೆ ರೈತ ಫಲಾನುಭವಿಗಳಿಗೆ ಹಣ ನೀಡಿಲ್ಲ. ಸಧ್ಯ ಪಂಚಾಯಿತಿಗೆ ₹೯ ಲಕ್ಷ ಅನುದಾನ ಬಂದಿರುವ ಮಾಹಿತಿ ಇದೆ. ಅದನ್ನು ಕೇಳಿದರೆ ಅದು ದನದ ಕೊಟ್ಟಿಗೆ ನಿರ್ಮಿಸಿಕೊಂಡ ರೈತರಿಗೆ ಅಲ್ಲ. ಬೇರೆ ಅಭಿವೃದ್ದಿಗೆ ಬಂದಿರುವುದಾಗಿ ಹೇಳುತ್ತಿದ್ದಾರೆ. ಹೀಗಾದರೆ ನಾವು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.ದನದ ಕೊಟ್ಟಿಗೆ ನಿರ್ಮಿಸಿಕೊಂಡ ರೈತ ಫಲಾನುಭವಿಗಳು ಕಳೆದ ಒಂದು ವರ್ಷದಿಂದ ಸರ್ಕಾರದಿಂದ ಬರಬೇಕಾದ ಹಣಕ್ಕಾಗಿ ಗ್ರಾಮ ಪಂಚಾಯಿತಿ ಬಾಗಿಲಿಗೆ ಅಲೆದಾಡಿದ್ದೇವೆ. ಸಾಲ ನೀಡಿದವರಿಗೆ ಬಡ್ಡಿ ರೂಪದಲ್ಲಿ ಹಣ ನೀಡಿ ಸಾಕಾಗಿದೆ. ಸಧ್ಯ ಒಂದು ವೇಳೆ ಹಣ ಬಂದರೂ ಪೂರ್ಣ ಹಣ ಕೈ ಸೇರುವುದಿಲ್ಲ. ನಾಲ್ಕಾರು ಜನರ ಕೈಚಳಕದ ಬಳಿಕ ರೈತರ ಕೈ ಸೇರುವಷ್ಟರಲ್ಲಿ ಸಹಾಯಧನದಲ್ಲಿ ಅರ್ಧ ಖಾಲಿಯಾಗಿರುತ್ತದೆ ಎಂದು ವ್ಯವಸ್ಥೆಯ ಚಿತ್ರಣ ಬಿಚ್ಚಿಟ್ಟು ಅಳಲು ತೋಡಿಕೊಂಡರು.ಪ್ರತಿಭಟನೆ ವೇಳೆ ಫಲಾನುಭವಿಗಳಾದ ಮಹಾಂತೇಶ ಭಗವಂತಿ, ಮಹಾದೇವಪ್ಪ ಡಂಬಳ, ಮುತ್ತು ಪರಸಪ್ಪನವರ, ಬಸಪ್ಪ ಬಾದಾಮಿ, ನಾಗಪ್ಪ ಬಳ್ಳಾರಿ, ಬಸಪ್ಪ ಗದಗ, ಶಿವಮೂರ್ತೆಪ್ಪ ಕಮ್ಮಾರ, ಫಕ್ಕೀರಗೌಡ ಪಾಟೀಲ, ದ್ರಾಕ್ಷಾಣೆವ್ವ ಸಂದೀಮನಿ, ನೀಲಪ್ಪ ವಾರದ, ಹನುಮಂತಪ್ಪ ಬಾಲೇಹೊಸೂರ, ಸಂಜೀವಪ್ಪ ಗೋಪಾಳಿ, ಫಕ್ಕೀರಪ್ಪ ಸಂಗಪ್ಪ ಹೆಬ್ಬಾಳ ಸೇರಿ ಅನೇಕರು ಇದ್ದರು.
ಶೇ. ೪೦ರಷ್ಟು ಅನುದಾನ: ರಣತೂರ ಗ್ರಾಮ ಪಂಚಾಯತಿಯಲ್ಲಿ ಕಳೆದ ೨೦೨೩ರಿಂದಲೂ ದನದ ಕೊಟ್ಟಿಗೆ ನಿರ್ಮಿಸಿಕೊಂಡ ರೈತ ಫಲಾನುಭವಿಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ೨೨ ಜನ ಫಲಾನುಭವಿಗಳ ಮಾಹಿತಿ ಕಳಿಸಿದ್ದು, ಸಧ್ಯ ಶೇ. ೪೦ರಷ್ಟು ಅನುದಾನ ಬಂದಿದ್ದು, ಅಧಿಕಾರಿಗಳ ಗಮನಕ್ಕೆ ತಂದು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದು ರಣತೂರ ಗ್ರಾಪಂ ಪಿಡಿಒ ರಾಜಕುಮಾರ ಭಜಂತ್ರಿ ತಿಳಿಸಿದರು.