ನರೇಗಾ ಕೂಲಿ, ಕೆಲಸ ನೀಡುವಂತೆ ಪ್ರತಿಭಟನೆ

| Published : Jun 28 2025, 12:21 AM IST

ಸಾರಾಂಶ

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಶುಕ್ರವಾರ ನರೇಗಾ ಕೂಲಿ ಕಾರ್ಮಿಕರು ನರೇಗಾ ಕೆಲಸವನ್ನು ನೀಡುವಂತೆ ಒತ್ತಾಯಿಸಿ ಗ್ರಾಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಶುಕ್ರವಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಜೊತೆಗೆ ಗ್ರಾಮದಲ್ಲಿ ಕೂಲಿಯನ್ನು ನೀಡಬೇಕು ಎಂದು ಒತ್ತಾಯಿಸಿ ನರೇಗಾ ಕೂಲಿ ಕಾರ್ಮಿಕರು ಗ್ರಾಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಪಂಚಾಯಿತಿ ಕಚೇರಿ ಮುಂಭಾಗ ನೂರಾರು ನರೇಗಾ ಕೂಲಿ ಕಾರ್ಮಿಕರು ನಮಗೆ ಪ್ರಸಕ್ತ ಸಾಲಿನಲ್ಲಿ ಉದ್ಯೋಖಾತ್ರಿ ಯೋಜನೆಯಡಿಯಲ್ಲಿ ಹಲವು ದಿನಗಳಿಂದ ಕೆಲಸ ನೀಡುತ್ತಿಲ್ಲ. ಗುತ್ತಿಗೆದಾರರು, ಇವರಿಗೆ ಕಮಿಷನ್ ಕೊಡುವವರಿಗೆ ಕೂಲಿ ನೀಡಲಾಗುತ್ತಿದೆ. ಪಂಚಾಯಿತಿ ಸದಸ್ಯರು, ಪಿಡಿಒ ಜೊತೆಗೂಡಿ ಅವರ ಇಚ್ಛಾನುಸಾರ ಕೂಲಿ ಕೆಲಸ ಮಾಡುತ್ತಿದ್ದಾರೆ. ಕೂಲಿಯಾಳುಗಳನ್ನು ಆಟೋಗಳಲ್ಲಿ ತುಂಬಿಸಿ ಫೋಟೋ ತೆಗೆಯಿಸಿ ಕೆಲಸ ಮಾಡದೆ ವಾಪಸ್ಸು ಕಳುಹಿಸಲಾಗುತ್ತದೆ. ಜೆಸಿಬಿಯಲ್ಲಿ ಕೆಲಸ ಮಾಡುವರಿಗೆ ಬಿಲ್ ಪಾವತಿಸಲಾಗಿದೆ. ಆದರೆ ಪ್ರಮಾಣಿಕವಾಗಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೆಲಸವನ್ನು ನೀಡುತ್ತಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಇಲ್ಲಿನ ಪಿಡಿಒ ನಮಗೆ ಸಮರ್ಪಕ ಉತ್ತರ ನೀಡುತ್ತಿಲ್ಲ.

ಅಲ್ಲದೆ, ಗ್ರಾಮದ ಪರಿಮಿತಿಯೊಳಗೆ ನಮಗೆ ಕೂಲಿ ಕೆಲಸವನ್ನು ನೀಡಿ ಎಂದು ಮನವಿ ಮಾಡಿದರೆ ಇದಕ್ಕೆ ಸ್ಪಂಧಿಸುತ್ತಿಲ್ಲ. ಗ್ರಾಮದಲ್ಲೇ ನರೇಗಾದಲ್ಲಿ ಕೆಲಸ ಮಾಡಲು ಅವಕಾಶವಿದ್ದರೂ ಸಹ ನಮಗೆ ಕೆಲಸ ನೀಡುತ್ತಿಲ್ಲ. ಆದರೆ ಬೇರೆಯವರು ಇಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಇಲ್ಲಿ ಕಾರ್ಮಿಕರ ನಡುವೆಯೇ ತಾರತಮ್ಯ ಮಾಡಲಾಗುತ್ತಿದೆ. ಅಲ್ಲದೆ ಈ ಹಿಂದೆ ಮಾಡಿದ್ದ ಕೂಲಿಯನ್ನು ಇನ್ನೂ ಪಾವತಿ ಮಾಡಿಲ್ಲ. ಬಡ ಕೂಲಿ ಕಾರ್ಮಿಕರು ನಾವಾಗಿದ್ದು ನಾವು ಸಾಲ ಮಾಡಿದ್ದೇವೆ. ಕೂಲಿ ಹಣ ಸಿಕ್ಕರೆ ಇದನ್ನು ತೀರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಬದುಕು ಕಷ್ಟವಾಗುತ್ತದೆ. ಕೂಡಲೇ ನಮಗೆ ಕೆಲವನ್ನು ನೀಡಬೇಕು ಎಂದು ರಾಜೇಶ್, ಮರಪ್ಪ, ಕಾವ್ಯ, ಮಂಗಳಮ್ಮ ಸೇರಿದಂತೆ ಅನೇಕರು ಆರೋಪಿಸಿ ಪಿಡಿಒ ಹಾಗೂ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ನರೇಗಾ ಸಹಾಯಕ ನಿರ್ದೇಶಕ ಕೆ.ಎಂ.ರವೀಂದ್ರ ಭೇಟಿ ನೀಡಿ ಮಾತನಾಡಿ, ನಿಮಗೆ ಎನ್‌ಎಮ್‌ಆರ್‌ನ್ನು ತೆಗೆದುಕೊಡುವಂತೆ ನಾನು ಸಂಬಂಧಪಟ್ಟ ಪಿಡಿಒಗೆ ಸೂಚನೆ ನೀಡಿದ್ದೇನೆ. ಶನಿವಾರದಿಂದ ಕೆಲಸವನ್ನು ಮಾಡಿ, ಈಗಾಗಿರುವ ಲೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ನಾನು ಸೂಕ್ತ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು. ಪಿಡಿಒ ಮಹದೇವಸ್ವಾಮಿ, ನರೇಗಾ ಕೂಲಿ ಕಾರ್ಮಿಕರಾದ ಶಿವಮ್ಮ, ಶೋಭಾ ದೊಡ್ಡಮ್ಮ, ಸವಿತಾ, ಸುಶೀಲಾ, ಮೀನಕ್ಷಿ, ಗೀತಾ, ಮಹದೇವಮ್ಮ, ಸಿದ್ದಮ್ಮ, ಶಾರದಾ, ಲಕ್ಷ್ಮಿ, ಕಾವ್ಯ, ಮಂಗಳಮ್ಮ ಸೇರಿದಂತೆ ನೂರಾರು ಮಂದಿ ಇದ್ದರು.