ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 2011-12ರಿಂದ ಗ್ರಾಚ್ಯುಟಿ (ನಿವೃತ್ತಿ ಉಪಧನ) ಜಾರಿಗೊಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಶನಿವಾರ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ನಿವೃತ್ತ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.ಎ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷೆ ಎಸ್.ಎನ್. ಜಯಲಕ್ಷ್ಮಿ ಮಾಧ್ಯಮದೊಂದಿಗೆ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಐ.ಸಿ.ಡಿ.ಎಸ್.ಯಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗ್ರಾಚ್ಯುಟಿ ಪಾವತಿ ಕಾಯಿದೆ ೧೯೭೨ರ ಅಡಿಯಲ್ಲಿ ಗ್ರಾಚ್ಯುಟಿ (ನಿವೃತ್ತಿ ಉಪಧನ) ಪಡೆಯಲು ಅರ್ಹರು ಎಂಬುದಾಗಿ ಸುಪ್ರೀಂಕೋರ್ಟ್ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ನ್ಯಾಯಪೀಠವು ಅಂಗನವಾಡಿ ನೌಕರರ ಕೆಲಸ-ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವರ ಕೆಲಸವು ಅರೆಕಾಲಿಕವಲ್ಲ, ಅಂಗನವಾಡಿ ಪೂರ್ಣ ನೌಕರರು ನಿರ್ವಹಿಸುತ್ತಿದ್ದಾರೆಂಬುದನ್ನು ಒತ್ತಿ ಹೇಳಿದ್ದಾರೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿಯಮಿತವಾದ ಸಂಬಳ ಹಾಗೂ ಮತ್ತಿತರ ಸವಲತ್ತುಗಳಿಂದಲೂ ವಂಚಿತರಾಗಿದ್ದಾರೆ. ಅವರು ನಿರ್ವಹಿಸುವ ಕೆಲಸ ಶಾಸನಬದ್ಧವಾಗಿದ್ದರೂ ಸಹ ಅದನ್ನು ನಾಗರೀಕ ಸೇವೆಯಿಂದಾಗಲಿ ಅಥವಾ ನಾಗರಿಕ ಹುದ್ದೆ ಎಂಬುದಾಗಿಯೂ ಪರಿಗಣಿಸಿರುವುದಿಲ್ಲ. ಹಾಗೂ ಕನಿಷ್ಠ ವೇತನಕ್ಕಿಂತ ಕಡಿಮೆ ಗೌರವಧನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಗಂಭೀರವಾಗಿ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ೧೯೭೨ರ ಗ್ರಾಚ್ಯುಟಿ ಪಾವತಿ ಕಾಯಿದೆಯ ಪ್ರಕಾರ ಯಾವುದೇ ಉದ್ಯೋಗ ಘಟಕದಲ್ಲಿ ೫ ವರ್ಷ ಸೇವೆ ಪೂರ್ಣಗೊಳಿಸಿ ಸ್ವಯಂ ನಿವೃತ್ತಿಯಾದವರು ಸಹ ಗ್ರಾಚ್ಯುಟಿ ಪಡೆಯಲು ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಹಾಗೂ ಪೂರ್ಣಕಾಲಿಕ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ನಿವೃತ್ತಿಗೊಂಡ ೩೦ ದಿನಗಳಲ್ಲಿ ಅವರಿಗೆ ಸಲ್ಲಬೇಕಾದ ಗ್ರಾಚ್ಯುಟಿ ಮೊತ್ತವನ್ನು ಪಾವತಿಸ ಬೇಕಾಗುತ್ತದೆ. ಗ್ರಾಚ್ಯುಟಿ ಪಾವತಿಯಲ್ಲಿ ವಿಳಂಬವಾದರೆ ಶೇ.೧೦ರಷ್ಟು ಬಡ್ಡಿ ಸಮೇತ ಸೇರಿಸಿ ಗ್ರಾಚ್ಯುಟಿ ಮೊತ್ತವನ್ನು ನೀಡಬೇಕೆಂಬುದು ಗ್ರಾಚ್ಯುಟಿ ಪಾವತಿ ಕಾಯಿದೆಯ ನಿಬಂಧನೆಯಾಗಿದೆ ಎಂದು ಎಂದು ಹೇಳಿದರು.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಹ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸಿ.ಡಿ.ಪಿ.ಒ ಅಧೀನದಲ್ಲಿನ ಯೋಜನೆ (ಪ್ರಾಜೆಕ್ಟ್) ಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳಾಗಿರುವುದರಿಂದ ಗ್ರಾಚ್ಯುಟಿ ಕಾಯಿದೆಯ ಪರಿಧಿಗೆ ಒಳಪಡುತ್ತಾರೆ. ಹಾಗೂ ಕಾಯಿದೆಯ ಪ್ರಕಾರ ಉದ್ಯೋಗಿಯು ಮರಣ ಹೊಂದಿದರೆ ಅವರ ನಾಮಿನಿ ಅಥವಾ ವಾರಸುದಾರರು ಗ್ರಾಚ್ಯುಟಿ ಪಡೆಯಲು ಕಾನೂನು ಬದ್ಧ ಹಕ್ಕುದಾರರಾಗುತ್ತಾರೆಂಬುದನ್ನು ಗ್ರಾಚ್ಯುಟಿ ಕಾಯಿದೆ ಸೃಷ್ಟೀಕರಿಸಿದೆ. ಆದುದರಿಂದ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ನೀಡುವುದು ಸರ್ಕಾರದ ಹೊಣೆಗಾರಿಕೆಯಾಗಿರುತ್ತದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಲು ನಿರ್ಧರಿಸಿದ್ದು ಅದನ್ನು ೨೦೨೩ರಿಂದ ನಿವೃತ್ತರಾದವರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದಾಗಿ ಘೋಷಿಸಿರುವುದು ೧೯೭೨ರ ಗ್ರಾಚ್ಯುಟಿ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ೧೯೭೫ರಲ್ಲಿ ಪ್ರಾರಂಭವಾದ ಯೋಜನೆಗೆ ಇದೀಗ ೫೦ ವರ್ಷಗಳಾಗುತ್ತಿದ್ದು, ಸೇವೆಗೆ ಸೇರಿದ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರು ೨೦೧೧-೧೨ನೇ ಸಾಲಿನಿಂದಲೇ ಕಾಲ-ಕಾಲಕ್ಕೆ ನಿವೃತ್ತರಾಗುತ್ತಾ ಬರುತ್ತಿದ್ದಾರೆ. ಈಗಾಗಲೇ ನಿವೃತ್ತರಾಗಿರುವ ಕಾರ್ಯಕರ್ತೆಯರು-ಸಹಾಯಕಿಯರಲ್ಲಿ ಬಹುತೇಕರು ಮರಣ ಹೊಂದಿದ್ದು ಉಳಿದಿರುವವರು ವಯೋವೃದ್ಧರಾಗಿ, ವಯೋಸಹಜ ಕಾಯಿಲೆಗಳಿಗೆ ತುತ್ತಾಗಿ, ಆರ್ಥಿಕ ಸಂಕಷ್ಟಕ್ಕೊಳಗಾಗಿ ತೀವ್ರತರ ಹದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ೨೦೨೩ರ ನಂತರ ನಿವೃತ್ತರಾಗುವವರಿಗೆ ಗ್ರಾಚ್ಯುಟಿ ನೀಡುವ ಸರ್ಕಾರದ ನಿರ್ಧಾರವನ್ನು ಮಾರ್ಪಡಿಸಿ ೧೯೭೫ರಿಂದ ಸೇವೆಗೆ ಸೇರಿ ೨೦೧೧-೧೨ರಿಂದ ನಿವೃತ್ತರಾದ ಎಲ್ಲರಿಗೂ ಅನ್ವಯವಾಗುವಂತೆ ಗ್ರಾಚ್ಯುಟಿ ಸೌಲಭ್ಯವನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಗೌರವಾಧ್ಯಕ್ಷ ಎ.ಸಿ. ಡೋಂಗ್ರೆ, ಕಾರ್ಯಾಧ್ಯಕ್ಷ ಲೀನಾ ಡಯಾಸ್, ಪ್ರಧಾನ ಕಾರ್ಯದರ್ಶಿ ವೇದಾವತಿ, ಖಜಾಂಚಿ ಪಿ.ಡಿ. ನಾಗರತ್ನ ಇತರರು ಇದ್ದರು.