ಹೊಸಪೇಟೆ: ಕರ್ನಾಟಕ ಗಣಿಗಾರಿಕೆ ಪರಿಸರ ಪುನಃಸ್ಥಾಪನೆ ನಿಗಮದ (KEMRC) ವತಿಯಿಂದ ಗಣಿ ಪೀಡಿತ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿರುವ ಸಮಗ್ರ ಪರಿಸರ ಯೋಜನೆ ಅನುಷ್ಠಾನವು ಸಾಕಷ್ಟು ವೇಗ ಪಡೆದುಕೊಂಡಿದೆ. ಈ ಯೋಜನೆಯಡಿ ಜಿಲ್ಲೆಯ ಅಭಿವೃದ್ಧಿಗೆ ₹4,107 ಕೋಟಿ ಅನುದಾನ ಲಭ್ಯವಿದ್ದು, ಈ ವರೆಗೆ ವಿವಿಧ ಇಲಾಖೆಗಳ ಕಾಮಗಾರಿಗಳ 99 ಪ್ರಸ್ತಾವನೆಗೆ ₹1710 ಕೋಟಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕರ್ನಾಟಕ ಗಣಿಗಾರಿಕೆ ಸಂತ್ರಸ್ತ ಪ್ರದೇಶಗಳ ಪುನರುಜ್ಜೀವನ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

2023ರಿಂದ ಈ ವರೆಗೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಅಡಿಯಲ್ಲಿ 99 ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅರಣ್ಯ ಇಲಾಖೆಗೆ ₹148 ಕೋಟಿ, ಮರಿಯಮ್ಮನಹಳ್ಳಿಯಲ್ಲಿ ಜಿಟಿಟಿಸಿ ಕಾಲೇಜ್ ಕಾಮಗಾರಿಗೆ ₹19.65 ಕೋಟಿ, ಹೀಗೆ ವಿವಿಧ ಇಲಾಖೆಗಳ ಅಭಿವೃದ್ಧಿಗಾಗಿ ಒಟ್ಟು ₹1,710 ಕೋಟಿ ಅನುದಾನ ಒದಗಿಸಲಾಗಿದೆ. ಗಣಿ ಬಾಧಿತ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಸಂಪರ್ಕ ಮತ್ತು ಶಾಲಾ ಕಟ್ಟಡಗಳ ಕಾಮಗರಿಗಳಿಗೆ ಮತ್ತು ಪರಿಸರ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.

ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ಪಾರದರ್ಶಕವಾಗಿ ಕೆಲಸ ನಿರ್ವಹಿಸುವಂತಾಗಿದೆ. ಗಣಿಗಾರಿಕೆಯಿಂದ ಜಿಲ್ಲೆಯ ನೈಸರ್ಗಿಕ ಸಂಪನ್ಮೂಲಗಳಿಗೆ ಆಗಿರುವ ಹಾನಿಯನ್ನು ಸರಿದೂಗಿಸಿ, ಸ್ಥಳೀಯರ ಜೀವನಮಟ್ಟವನ್ನು ಸುಧಾರಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದರು.ಗಣಿ ಪೀಡಿತ ಪ್ರದೇಶಗಳ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಆದ್ಯತೆ ಯೋಜನೆಗಳ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದ್ದು, ಪ್ರಸ್ತಾವನೆ ಸಲ್ಲಿಸಿದ ಯೋಜನೆ ಸಾಮಾಜಿಕ ಕಳಕಳಿಯನ್ನು 3 ಹಂತಗಳಲ್ಲಿ ಪರಿಶೀಲಿಸಿ ನಂತರ ಅನುಮೋದನೆ ನೀಡಲಾಗುತ್ತದೆ. ಗಣಿಗಾರಿಕೆಯಿಂದ ಹೆಚ್ಚು ಹಾನಿಗೊಳಗಾದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಒಟ್ಟು 10 ತಾಲೂಕುಗಳನ್ನು ಗಣಿಭಾದಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಭಾಗದ ಜನರ ಜೀವನಮಟ್ಟ ಸುಧಾರಣೆ ಮತ್ತು ಪರಿಸರದ ಮರುಸ್ಥಾಪನೆಗೆ ನಿಗಮ ಕಟಿಬದ್ಧವಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಾದ್ಯಂತ ₹2500 ಕೋಟಿ ಪ್ರಸ್ತಾವನೆ ಬಾಕಿ


ಕರ್ನಾಟಕ ಗಣಿಗಾರಿಕೆ ಪರಿಸರ ಪುನಃಸ್ಥಾಪನೆ ನಿಗಮದಲ್ಲಿ ಗಣಿ ಭಾದಿತ ಪ್ರದೇಶ ವ್ಯಾಪ್ತಿಯ ವಿವಿಧ ಇಲಾಖೆಗಳಿಂದ ₹2500 ಕೋಟಿ ಪ್ರಸ್ತಾವನೆ ಬರಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಡಿಪಿಆರ್ ಸಿದ್ಧಪಡಿಸಿ ನೀಡಿದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಸರಿ ಇದ್ದರೆ ಅನುಮೋದನೆ ನೀಡಲಾಗುವುದು ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಅನುಪಮ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.