ಸದ್ಯ ಏಕಾಏಕಿಯಾಗಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ಶಾಲೆಗೆ ದಾನ ನೀಡಿರುವ 5 ಎಕರೆ ಜಾಗದಲ್ಲಿ 3 ಎಕರೆ ಜಾಗ ವಾಪಸ್ ಪಡೆಯಲು ಹುನ್ನಾರ
ಗಂಗಾವತಿ: ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಜಾಗ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ಎಸ್‌ಎಫ್‌ಐ ಸಂಘಟನೆಯ ಕಾರ್ಯಕರ್ತರು ನಗರದ ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥ ಶ್ರೀನಿವಾಸ ಮಾತನಾಡಿ, ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಾಗಿ ಕಲ್ಮಠದ ಆಗಿನ ಶ್ರೀ ಚನ್ನಬಸವಸ್ವಾಮಿಗಳು 1980ರಲ್ಲಿಯೇ 5ಎಕರೆ ಜಾಗ ದಾನರೂಪದಲ್ಲಿ ಸರ್ಕಾರಿ ಶಾಲೆಗೆ ನೀಡಿದ್ದಾರೆ. ಅದರಲ್ಲಿ 2 ಎಕರೆ ಜಾಗ ಸರ್ಕಾರಿ ಶಾಲೆ ನಿರ್ಮಾಣ ಮಾಡಲಾಗಿದೆ. ಉಳಿದ 3 ಎಕರೆ ಜಾಗ ಶಾಲೆಯ ಬಳಕೆಗಾಗಿ ಹಾಗೇ ಬಿಡಲಾಗಿದೆ. ಶಾಲೆಯ ಆಸ್ತಿಗೆ ಸಂಬಂಧಪಟ್ಟಂತೆ ಪಹಣಿಯಲ್ಲಿ ಸಹ ಅಧ್ಯಕ್ಷರು ಶಾಲಾ ಸುಧಾರಣಾ ಸಮಿತಿ ಎಂದು ನಮೂದಿಸಲಾಗಿದೆ. ಈ 5 ಎಕರೆ ಸರ್ಕಾರಿ ಶಾಲೆಯ ಜಾಗದ ವಾರಸುದಾರರು ಕ್ಷೇತ್ರ ಶಿಕ್ಷಣಾಧಿಕಾರಿ ಆಗಿರುತ್ತಾರೆ.ಈಗಾಗಲೇ ಶಾಲೆ ದಾನವಾಗಿ ನೀಡಿ 45 ವಷ೯ಗಳು ಕಳೆದಿದ್ದರೂ ಸಹ ರಾಜ್ಯಪಾಲರ ಹೆಸರಿಗೆ ಪಹಣಿ ಬದಲಾವಣೆ ಮಾಡಿಕೊಂಡಿಲ್ಲ. ಈ ಕುರಿತು ಗ್ರಾಮಸ್ಥರು ಸುಮಾರು ಬಾರಿ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದರೆ ಸದ್ಯ ಏಕಾಏಕಿಯಾಗಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ಶಾಲೆಗೆ ದಾನ ನೀಡಿರುವ 5 ಎಕರೆ ಜಾಗದಲ್ಲಿ 3 ಎಕರೆ ಜಾಗ ವಾಪಸ್ ಪಡೆಯಲು ಹುನ್ನಾರ ನಡೆಸಿದ್ದಾರೆ.ಈಗಾಗಲೇ ಸರ್ಕಾರಿ ಅಧಿಕಾರಿಗಳಿಗೆ ಹಣ ಆಮಿಷ ತೋರಿಸಿ, ಪಹಣಿ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ 3 ಎಕರೆ ಜಾಗ ಪೋಡಿ ಮಾಡಲು ಸಹ ಅರ್ಜಿ ಸಲ್ಲಿಸಿದ್ದಾರೆ. ದಾನ ನೀಡಿರುವ ಜಮೀನು ವಾಪಸ್ ಪಡೆಯಲು ಮುಂದಾಗಿರುವ ಸ್ವಾಮೀಜಿ ನಡೆ ಖಂಡಿಸಲಾಗುವುದು ಎಂದು ಒತ್ತಾಯಿಸಿದರು.
ಹೊಸಳ್ಳಿ ಗ್ರಾಮದಿಂದ ಗ್ರಾಮಸ್ಥರು ಪಾದಯಾತ್ರೆ ಮೂಲಕ ಆಗಮಿಸಿ, ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಎಸ್‌ಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ, ರಾಜ್ಯ ಉಪಾಧ್ಯಕ್ಷ ಗ್ಯಾನೇಶ್ ಕಡಗದ, ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಗ್ರಾಮಸ್ಥ ಸಿದ್ದು, ವೀರೇಶ್, ಮಲ್ಲಿಕಾರ್ಜುನ, ಸಿದ್ದಪ್ಪ ಕರೆಕುರಿ, ವೀರುಪಣ್ಣ, ಪಂಪಣ್ಣ, ಪರ್ವತಯ್ಯ, ಗುರಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.