ಕೇಂದ್ರ ಸರ್ಕಾರ ರೈಲ್ವೆ ನೇಮಕಾತಿ ಪ್ರವೇಶ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲೇ ಬರೆಯಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಸೋಮವಾರ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಹಾವೇರಿ: ಕೇಂದ್ರ ಸರ್ಕಾರ ರೈಲ್ವೆ ನೇಮಕಾತಿ ಪ್ರವೇಶ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲೇ ಬರೆಯಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಸೋಮವಾರ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಪ್ರಾಂತೀಯ ಭಾಷೆಗಳನ್ನು ಕಡೆಗಣಿಸಿ ಹಿಂದಿ ಹೇರಿಕೆ ಮಾಡಿ ಮತ್ತು ಇಂಗ್ಲಿಷ್ ಭಾಷೆಗೆ ಮನ್ನಣೆ ನೀಡುತ್ತಿದ್ದಾರೆ ಎಂದು ಸ್ವಾಭಿಮಾನಿ ಬಣದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ, ಕೇಂದ್ರದಲ್ಲಿ ಅಧಿಕಾರ ನಡೆಸಿದ ಎಲ್ಲ ಸರ್ಕಾರಗಳು ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅಪಮಾನ ಮಾಡುತ್ತಿವೆ. ಕೇಂದ್ರ ಸರ್ಕಾರ ರೈಲ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಪರೀಕ್ಷೆ ನಡೆಸುವ ಸಮಯದಲ್ಲಿ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಕರ್ನಾಟಕದಿಂದ ಆಯ್ಕೆಯಾದ ಸಂಸದರು, ಕೇಂದ್ರ ಸಚಿವರು ಕಣ್ಣಿದ್ದೂ ಕುರುಡರಾಗಿದ್ದಾರೆ ಎಂದು ಆರೋಪಿಸಿದರು.ಇನ್ನಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಕನ್ನಡದಲ್ಲೇ ಪರೀಕ್ಷೆಗಳನ್ನು ನಡೆಸಬೇಕು. ರಾಜ್ಯದ ಗ್ರಾಮೀಣ ಭಾಗದ ಪ್ರತಿಭಾನ್ವಿತರು ಕನ್ನಡದಲ್ಲಿ ಪರೀಕ್ಷೆಯನ್ನು ಎದುರಿಸಿ ಉದ್ಯೋಗ ಪಡೆಯುವ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.ಸಂಘಟನೆಯ ಮಹಿಳಾ ಕಾರ್ಯಾಧ್ಯಕ್ಷೆ ಗೀತಾ ಅರಳೆಲೆಮಠ, ರೂಪಾ ಬಂಗಿ, ಅಧ್ಯಕ್ಷ ಆನಂದ ಮುರಡಪ್ಪನವರ, ಪ್ರೇಮಲತಾ ಮುದ್ದಿ, ಪ್ರಕಾಶ ಗೋಣೆಮ್ಮನವರ, ಜ್ಯೋತಿ ಚಿಗಳ್ಳಿ, ನಾಗರಾಜ ಸಿಡ್ಲಣ್ಣವರ, ಮಾರುತಿ ತಾಂದಳೆ, ಶಿವಾನಂದ ಚಾಕಲಬ್ಬಿ, ಶಂಭು ಕೇರಿ, ರವಿ ಕಡಕೋಳ, ಗೌರಮ್ಮ, ಮುಸ್ತಾಕ್ ಮುಲ್ಲಾ ಇತರರಿದ್ದರು.