ಹಳೆಚಂದಾಪುರ ಸರ್ಕಾರಿ ಶೌಚಾಲಯ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

| Published : Apr 30 2024, 02:01 AM IST

ಹಳೆಚಂದಾಪುರ ಸರ್ಕಾರಿ ಶೌಚಾಲಯ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಯ ಶೌಚಾಲಯ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ಸೋಮವಾರ ತಾಲೂಕಿನ ಹಳೆಚಂದಾಪುರ ಗ್ರಾಮದಲ್ಲಿ ನಡೆದಿದೆ.

ರಾಣಿಬೆನ್ನೂರು: ಸರ್ಕಾರಿ ಶಾಲೆಯ ಶೌಚಾಲಯ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ಸೋಮವಾರ ತಾಲೂಕಿನ ಹಳೆಚಂದಾಪುರ ಗ್ರಾಮದಲ್ಲಿ ನಡೆದಿದೆ.

ಕಳೆದೊಂದು ವರ್ಷದಿಂದ ಶಾಲೆಯಲ್ಲಿರುವ ಶೌಚಾಲಯವು ದುರಸ್ತಿಯಲ್ಲಿದೆ. ಅದಕ್ಕೆ ಬಾಗಿಲು ಇಲ್ಲ, ಅಲ್ಲದೆ ನೀರೂ ಸಹಿತ ಇಲ್ಲ. ಹೆಸರಿಗೆ ಮಾತ್ರ ಶೌಚಾಲಯವಿದೆ. ಇದರಿಂದ ಮಕ್ಕಳಿಗೆ ಹಾಗೂ ಶಿಕ್ಷಕರಿಗೂ ತೊಂದರೆಯುಂಟಾಗಿದೆ. ಲೋಕಸಭಾ ಚುನಾವಣೆ ಮತದಾನ ನಿಮಿತ್ತ ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ದುರಸ್ತಿಗೊಳಿಸಿ ಸರಿಯಾಗಿ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಯಿಂದ ನೋಡಿಕೊಳ್ಳುವಂತೆ ಗ್ರಾಪಂನವರಿಗೆ ಚುನಾವಣಾಧಿಕಾರಿಗಳು ತಿಳಿಸಿದರೂ ಗ್ರಾಪಂನವರು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ಪಿಡಿಒ ನಾಗರಾಜ ಅಳಲಗೇರಿ ಅವರಿಗೆ ಹಲವಾರು ಬಾರಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ಶೌಚಾಲಯವನ್ನು ದುರಸ್ತಿಗೊಳಿಸಿ ಸಮರ್ಪಕವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಶಾಲೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದರು.

ಈ ಬಗ್ಗೆ ಚಿಕ್ಕಕುರುವತ್ತಿ ಪಿಡಿಒ ನಾಗರಾಜ ಅಳಲಗೇರಿ ಅವರನ್ನು ಗ್ರಾಮಸ್ಥರು ದೂರವಾಣಿಯ ಮೂಲಕ ಸಂಪರ್ಕಿಸಿದಾಗ, ಈಗಾಗಲೇ ಪೈಪ್‌ಲೈನ್ ಹಾಕಿ ಸಿಂಟ್ಯಾಕ್ಸ್ ಟ್ಯಾಂಕ್‌ ಇಡಲಾಗಿದೆ. ಶೌಚಾಲಯವನ್ನು ತಕ್ಷಣ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದ ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.