ಸಾರಾಂಶ
ದಾಂಡೇಲಿ: ಹಳೆದಾಂಡೇಲಿ ಭಾಗದ ರಸ್ತೆ ದುರಸ್ತಿಗೊಳಿಸಿ ಡಾಂಬರೀಕರಣ ಮಾಡುವಂತೆ ಆಗ್ರಹಿಸಿ ಪಟೇಲ್ ವೃತ್ತದ ಹತ್ತಿರ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ನೀರಿನ ಪೈಪ್‌ಲೈನ್ ಮತ್ತು ಯುಜಿಡಿ ಕಾಮಗಾರಿಗೆ ಹಳೆದಾಂಡೇಲಿಯಲ್ಲಿ ರಸ್ತೆ ಅಗೆದ ಕಾರಣ ಹದಗೆಟ್ಟಿದೆ.
ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ತೀವ್ರ ಹದಗೆಟ್ಟ ಹಿನ್ನೆಲೆ ಸಾಕಷ್ಟು ಅಪಘಾತ ನಡೆಯುವಂತಾಗಿದೆ. ಕೂಡಲೇ ಹಳೆದಾಂಡೇಲಿ ರಸ್ತೆ ದುರಸ್ತಿಗೊಳಿಸಿ ಡಾಂಬರೀಕರಣ ಮಾಡುವಂತೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸತೀಶ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುಧಾಕರ ಕಟ್ಟಿಮನಿ ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ರಸ್ತೆ ದುರಸ್ತಿಯ ಭರವಸೆ ನೀಡಿದರು.
ಈ ವೇಳೆ ವಿಷ್ಣು ಕಾಮತ, ಸತೀಶ ನಾಯ್ಕ, ಅನ್ವರ ಪಠಾಣ, ರಾಜು ಕೊಡಕಣಿ, ವಿನೋದ ಬಾಂದೆಕರ, ಸರ್ಫರಾಜ ಮುಲ್ಲಾ, ಆರ್.ಎಸ್. ಖಾಜಿ, ತೌಫಿಕ್ ಸಯ್ಯದ್, ಶಾಂತ ಮಹಾಲೆ, ಶಾಮ್ ಬೆಂಗಳೂರು, ಸಲೀಮ್ ಸಯ್ಯದ್, ಇಲಿಯಾಸ ಐನಾಪುರ, ಜಾನ್ ಡಿಸಿಲ್ವಾ, ಅಟೋ ಚಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.ಸಿಪಿಐ ಭೀಮಣ್ಣ ಎಂ. ಸೂರಿ ಹಾಗೂ ಪಿಎಸ್‌ಐ ಯಲ್ಲಪ್ಪ ಎಸ್, ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು.