ಇಂಟರ್ ಯುನಿವರ್ಸಿಟಿ ಸ್ಪರ್ಧೆಗೆ ಕಳಿಸಲು ಒತ್ತಾಯಿಸಿ ಪ್ರತಿಭಟನೆ

| Published : Dec 26 2023, 01:32 AM IST / Updated: Dec 26 2023, 01:33 AM IST

ಇಂಟರ್ ಯುನಿವರ್ಸಿಟಿ ಸ್ಪರ್ಧೆಗೆ ಕಳಿಸಲು ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ವಿಶ್ವವಿದ್ಯಾಲಯದ ಖೋಖೋ ಪ್ರಥಮ ತಂಡವನ್ನು ಕೇರಳದ ಕ್ಯಾಲಿಕಟ್ ಯುನಿವರ್ಸಿಟಿಯಲ್ಲಿ ನಡೆಯುವ ಪಂದ್ಯಾವಳಿಗೆ ಕಳಿಸಲು ಒತ್ತಾಯಿಸಿ ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳ ನಡೆ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಹಾವೇರಿ ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಾವೇರಿ

ಹಾವೇರಿ ವಿಶ್ವವಿದ್ಯಾಲಯದ ಖೋಖೋ ಪ್ರಥಮ ತಂಡವನ್ನು ಕೇರಳದ ಕ್ಯಾಲಿಕಟ್ ಯುನಿವರ್ಸಿಟಿಯಲ್ಲಿ ನಡೆಯುವ ಪಂದ್ಯಾವಳಿಗೆ ಕಳಿಸಲು ಒತ್ತಾಯಿಸಿ ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳ ನಡೆ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಹಾವೇರಿ ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು.

ಡಿ.5 ಮತ್ತು 6ರಂದು ಸವಣೂರಿನ ಲಲಿತಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ ಪಂದ್ಯಾವಳಿಯಲ್ಲಿ ಹಾವೇರಿ ವಿವಿ ಖೋಖೋ ತಂಡವನ್ನು ಆಯ್ಕೆ ಮಾಡಲಾಗಿತ್ತು. ಕೇರಳದ ಕ್ಯಾಲಿಕಟ್ ಯುನಿವರ್ಸಿಟಿಯಲ್ಲಿ ಡಿ.26 ರಿಂದ 30ವರೆಗೆ ನಡೆಯುವ ಸೌತ್ ಜೋನ್ ಇಂಟರ್ ಯುನಿವರ್ಸಿಟಿ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ತಯಾರಿ ಮಾಡಿಕೊಳ್ಳಿ ಹಾವೇರಿ ವಿವಿ ಕುಲಪತಿಗಳ ಅನುಮತಿಗೆ ಎಲ್ಲಾ ದಾಖಲೆ ಕಳಿಸಿದ್ದೇವೆ ಎಂದು ಹೇಳಲಾಗಿತ್ತು. ಆದರೆ ಪಂದ್ಯಾವಳಿ ಹತ್ತಿರ ಬರುತ್ತಿದಂತೆ ಅನುದಾನದ ಕೊರತೆಯ ನೆಪ ಹೇಳಿ ಖೋಖೋ ತಂಡವನ್ನು ಕೇರಳದ ಟೂರ್ನಮೆಂಟ್‌ಗೆ ಕಳಿಸಲು ಮೀನಾಮೇಷ ಮಾಡಲಾಗುತ್ತಿದೆ. ಎಲ್ಲಾ ಶಾಸಕರು, ಉನ್ನತ ಶಿಕ್ಷಣ ಸಚಿವರು, ಕ್ರೀಡಾ ಸಚಿವರು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು, ಕುಲಪತಿ ಮೇಲೆ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ್ ವಡತೇರ, ರಾಜು ವಡತೇರ, ನಾಗರಾಜ ಲಮಾಣಿ, ಯಶವಂತ್ ಲಮಾಣಿ, ನವೀನ್ ಲಮಾಣಿ, ಯುವರಾಜ ಲಮಾಣಿ, ಲಕ್ಷ್ಮಣ ಮರಡೂರ, ಬಸಯ್ಯ ಸಾಲಿಮಠ ಸೇರಿದಂತೆ ಇತರರು ಇದ್ದರು.

₹50 ಸಾವಿರ ನೀಡುವ ಭರವಸೆ:

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರನ್ನು ಖೋಖೋ ಕ್ರೀಡಾಪಟು ವಿದ್ಯಾರ್ಥಿಗಳು ಭೇಟಿ ಮಾಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅನುಮತಿ ಕೊಡಿಸುವಂತೆ ಒತ್ತಾಯಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಲೀಂ ಅಹ್ಮದ್ ನಮ್ಮ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರರಾಜ್ಯದಲ್ಲಿ ತೋರಿಸುವುದು ಸಂತೋಷದ ವಿಚಾರ. ಇಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡದಿದ್ದರೆ ಹೇಗೆ?, ನಾನು ವೈಯಕ್ತಿಕವಾಗಿ ₹50 ಸಾವಿರ ಕೊಡುತ್ತೇನೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಜಯಗಳಿಸಿ ಬನ್ನಿ ಎಂದು ಶುಭ ಹಾರೈಸಿದ ಅವರು, ದೂರವಾಣಿ ಮೂಲಕ ಕುಲಪತಿಗಳಿಗೆ ತರಾಟೆಗೆ ತೆಗೆದುಕೊಂಡು ಈ ಕೂಡಲೇ ವಿದ್ಯಾರ್ಥಿಗಳನ್ನು ಕೇರಳದ ಟೂರ್ನಮೆಂಟ್‌ಗೆ ಕಳಿಸಿಕೊಡಿ ಎಂದು ಹೇಳಿದರು.