ಕಾರ್ಮಿಕರ ನೋಂದಣಿ ಪ್ರಕ್ರಿಯೆ ಸರಳಕ್ಕಾಗಿ ಆಗ್ರಹಿಸಿ ಪ್ರತಿಭಟನೆ

| Published : Feb 12 2024, 01:36 AM IST

ಸಾರಾಂಶ

ಕಾರ್ಮಿಕರ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ಸರಳಗೊಳಿಸಬೇಕು ಎಂಬುದು ಸೇರಿ ವಿವಿಧ 23 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಕಾರ್ಮಿಕರು ಭಾನುವಾರದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಈ ವೇಳೆ ಸಂಘಟನೆ ಮುಖಂಡ ಬಿ.ದೇವರಾಜ್‌ ಮಾತನಾಡಿ, ರಾಜ್ಯದಲ್ಲಿ 1.50 ಕೋಟಿಗೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಕಾರ್ಮಿಕರ ನೋಂದಣಿ ಆಗುತ್ತಿಲ್ಲ. ಮಕ್ಕಳಿಗೆ ಸಮರ್ಪಕವಾಗಿ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಸಾಕಷ್ಟು ಬಾರಿ ಹೋರಾಟ ನಡೆಸಿ ಮನವಿ ನೀಡಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸುಳ್ಳು ಭರವಸೆ ನೀಡಿ ನಮ್ಮ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಚಿ.ನಾ.ರಾಮು ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ, ಅನುದಾನ ಸೋರಿಕೆಯಾಗುತ್ತಿದೆ. ಸರ್ಕಾರ ಕಾರ್ಮಿಕರ ಪರ ಧೋರಣೆ ಅನುಸರಿಸುತ್ತಿಲ್ಲ. ಕಾರ್ಮಿಕರ ಉದ್ಯೋಗ ಭದ್ರತೆ ಬಗ್ಗೆ ಯಾವುದೇ ಕಾಳಜಿ ತೋರುತ್ತಿಲ್ಲ. ಕಾರ್ಮಿಕರ ಒಳಿತಿಗಾಗಿರುವ ಹಣ ದುರ್ಬಳಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ವಕೀಲ ಆರ್‌.ಎಲ್‌.ಎನ್‌.ಮೂರ್ತಿ, ಹೋರಾಟಗಾರ ಮೇಲುಕೋಟೆ ಬೆಟ್ಟಸ್ವಾಮಿ ಇದ್ದರು.