ಅಂಗನವಾಡಿಯಲ್ಲೇ ಎಲ್‌ಕೆಜಿ ಯುಕೆಜಿ ಆರಂಭಿಸಲು ಒತ್ತಾಯಿಸಿ ಪ್ರತಿಭಟನೆ

| Published : Jun 15 2024, 01:02 AM IST

ಅಂಗನವಾಡಿಯಲ್ಲೇ ಎಲ್‌ಕೆಜಿ ಯುಕೆಜಿ ಆರಂಭಿಸಲು ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಅಂಗನವಾಡಿಗಳನ್ನು ಮೊಟಕುಗೊಳಿಸುವ ಹುನ್ನಾರದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿಗಳನ್ನು ತೆರೆಯಲು ಮುಂದಾಗಿದೆ.

ಬಳ್ಳಾರಿ: ಸರ್ಕಾರಿ ಶಾಲೆಗಳ ಬದಲು ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಲು ಆಗ್ರಹಿಸಿ ಎಐಟಿಯುಸಿ, ಸಿಐಟಿಯು ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂಭಾಗ ಪ್ರತ್ಯೇಕ ಪ್ರತಿಭಟನೆಗಳು ನಡೆದವು.

ರಾಜ್ಯ ಸರ್ಕಾರ ಅಂಗನವಾಡಿಗಳನ್ನು ಮೊಟಕುಗೊಳಿಸುವ ಹುನ್ನಾರದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿಗಳನ್ನು ತೆರೆಯಲು ಮುಂದಾಗಿದೆ. ಇದರಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮುಖ್ಯ ಆಶಯಕ್ಕೆ ಧಕ್ಕೆಯಾಗಲಿದೆ. ಪ್ರಸಕ್ತ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಲು ಸರ್ಕಾರ ಆದೇಶಿಸಿತ್ತು. ಸರ್ಕಾರದ ಧೋರಣೆ ಖಂಡಿಸಿ ವಿವಿಧ ಅಂಗನವಾಡಿ ಸಂಘಟನೆಗಳ ಹೋರಾಟಕ್ಕೆ ಮಣಿದು, ಆದೇಶ ತಡೆ ಹಿಡಿಯಲಾಗಿತ್ತು. ಆದರೆ, ಇದೀಗ ಮತ್ತೊಂದು ಆದೇಶ ಹೊರಡಿಸಲಾಗಿದ್ದು, ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವಂತೆ ನಡೆಸಲು ಸೂಚಿಸಲಾಗಿದೆ. ರಾಜ್ಯ ಶಿಕ್ಷಣ ನೀತಿ ರೂಪಿತ ಮುನ್ನವೇ ಶಾಲಾ ಶಿಕ್ಷಣ ಇಲಾಖೆಯು ಅಂಗನವಾಡಿಗಳಿಗೆ ತೆರಳಬೇಕಾದ 3ರಿಂದ 6 ವರ್ಷ ವಯೋಮಾನದ ಮಕ್ಕಳಿಗಾಗಿ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಡುತ್ತಿರುವುದು ಸಮಗ್ರ ಶಿಶು ಅಭಿವೃದ್ಧಿಯಂತಹ ಮಹತ್ವದ ಯೋಜನೆಯ ವಿರುದ್ಧದ ಪ್ರಕ್ರಿಯೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜರುಗಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷೆ ಆರ್ಕಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈ.ಮಂಗಮ್ಮ, ಸಂಘಟೆಯ ಕಾನೂನು ಸಲಹೆಗಾರ ಎಆರ್‌ಎಂ ಇಸ್ಮಾಯಿಲ್ ಹಾಗೂ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎ. ಆದಿಮೂರ್ತಿ ಮಾತನಾಡಿದರು.

ಸಂಘಟನೆಯ ಜಿಲ್ಲಾ ಪ್ರಮುಖರಾದ ಎರ್ರೆಮ್ಮ, ಸೌಭಾಗ್ಯಮ್ಮ, ಪಿ.ಡಿ. ಮೀನಾಕುಮಾರಿ, ಬಿ.ಕೆ. ಶಾರದಾ, ಟಿ.ಇಂದಿರಾ, ನಾಗರತ್ನಮ್ಮ, ಪಿ.ಕವಿತಾ, ಸ್ವರೂಪಾರಾಣಿ, ಶಿವಗಂಗಮ್ಮ, ಕಲಾವತಿ, ಮಂಗಳಗೌರಿ, ಪಿ.ಸತ್ಯಸಾವತ್ರಿ, ಪದ್ಮಾವತಿ, ಜಮೇಲಾ, ಈರಮ್ಮ ಮತ್ತಿತರರಿದ್ದರು.

ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಸಿಐಟಿಯು ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ ಜರುಗಿತು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿಯನ್ನು ಪ್ರಾರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಸರ್ಕಾರ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿ ಆರಂಭಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಎಲ್‌ಕೆಜಿ-ಯುಕೆಜಿಗೆ ಬೋಧಿಸಲು ಹೆಚ್ಚಿನ ತರಬೇತಿ ನೀಡಬೇಕು. ಮಕ್ಕಳಿಗೆ ಬೇಕಾಗುವ ಸಮವಸ್ತ್ರ, ಶೂ, ಬ್ಯಾಗ್, ಪಠ್ಯಪುಸ್ತಕಗಳನ್ನು ಅಂಗನವಾಡಿಗಳಿಗೆ ಪೂರೈಸಬೇಕು ಹಾಗೂ ಶಾಲಾಪೂರ್ವ ಶಿಕ್ಷಣವನ್ನು ಬಲವರ್ಧನೆಗೊಳಿಸಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ಬಿ.ಉಮಾದೇವಿ, ಕಾರ್ಯದರ್ಶಿ ಎಸ್‌.ಎಚ್‌.ಶಕುಂತಲಾ, ಪಿ.ವಿಮಲಾ, ರಾಣಿ ಎಲಿಜಬತ್, ಸಂಗಮ್ಮ, ಶಿವಮ್ಮ, ಮೌನಮ್ಮ, ರೂಪಕಲಾ, ನೀಲಮ್ಮ, ವೀಣಾ, ಮಾರ್ಗರೇಟ್, ಪದ್ಮಾ ಮತ್ತಿತರರಿದ್ದರು. ಬಳಿಕ ಇಲಾಖೆಯ ಉಪ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ಕಳಿಸಿಕೊಡಲಾಯಿತು.