ವರದಾ ನದಿ ನೀರನ್ನು ತಡಸ ಹಾಗೂ ಸುತ್ತಮುತ್ತಲಿನ ಗ್ರಾಮದ ಕೆರೆಗಳಿಗೆ ತುಂಬಿಸುವಂತೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಎತ್ತಿನ ಗಾಡಿ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಿದರು.
ಶಿಗ್ಗಾಂವಿ: ವರದಾ ನದಿ ನೀರನ್ನು ತಡಸ ಹಾಗೂ ಸುತ್ತಮುತ್ತಲಿನ ಗ್ರಾಮದ ಕೆರೆಗಳಿಗೆ ತುಂಬಿಸುವಂತೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಎತ್ತಿನ ಗಾಡಿ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಿದರು.
ತಾಲೂಕಿನ ತಡಸ ಗ್ರಾಮದ ಬಸ್ ನಿಲ್ದಾಣದ ಮುಂಭಾಗದಲ್ಲಿ ರೈತರು ತಮ್ಮ ಮೈಮೇಲೆ ನೀರು ಹಾಕಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿ ಕೆಲಕಾಲ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯನ್ನು ತಡೆದು ತದನಂತರ ಮೆರವಣಿಗೆ ಮೂಲಕ ಅಧಿಕಾರಿಗಳ ವಿರುದ್ಧ ಘೋಷಣೆ ಹಾಕುತ್ತಾ ಗ್ರಾಮ ಪಂಚಾಯಿತಿಗೆ ಮೆರವಣಿಗೆ ತಲುಪಿತು.ಗ್ರಾಮದ ಕೆರೆಗಳಿಗೆ ನೀರು ತುಂಬಿಸಬೇಕು, ಕಬ್ಬಿನ ದರವನ್ನು ಕರ್ನಾಟಕದಲ್ಲಿ ಪ್ರತಿ ಟನ್‌ಗೆ ೫೫೦೦ ರು. ನಿಗದಿ ಮಾಡುವಂತೆ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಗೋವಿನ ಜೋಳವನ್ನು ಕರ್ನಾಟಕದಲ್ಲಿರುವ ಎಲ್ಲಾ ಕಂಪನಿಗಳು ಕೇಂದ್ರ ಸರ್ಕಾರದ ಆದೇಶದಂತೆ ಖರೀದಿ ಮಾಡಬೇಕೆಂದು ರೈತರು ಅಧಿಕಾರಿಗಳಿಗೆ ಒತ್ತಾಯಿಸಿದರು.
ನಂತರ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಕರಿಯಪ್ಪ ಆಲೂರು, ತಡಸ ಗ್ರಾಮದ ರೈತರ ಹೊಲಗಳಿಗೆ ಹೋಗುವ ದಾರಿ ಸರಿಪಡಿಸಬೇಕು, ಮಧ್ಯಂತರ ಬೆಳೆವಿಮೆಯನ್ನು ರೈತರ ಖಾತೆಗೆ ಜಮಾ ಮಾಡುವಂತೆ ಆಗ್ರಹಿಸಿದರು.ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಲಮಂಡಳಿಯ ಸಹಾಯಕ ಅಧಿಕಾರಿ ರವಿ ಅರಸಿಕೆರೆ ಮನವಿ ಸ್ವೀಕರಿಸಿ ತಡಸ ಭಾಗದ ಕೆರೆಗಳಿಗೆ ೨೨ರಂದು ವರದಾ ನದಿಯ ನೀರನ್ನು ಬಿಡುವುದಾಗಿ ಭರವಸೆ ನೀಡಿದರು.
ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಸಲಿಂಗಪ್ಪ ನರಗುಂದ ಮಾತನಾಡಿ, ತಡಸ ಭಾಗದ ಕೆರೆಗಳಿಗೆ ೨೨ನೇ ತಾರೀಖಿನಂದು ಅಧಿಕಾರಿಗಳು ನೀರನ್ನು ಬಿಡದೆ ಹೋದರೆ ೨೫ರಂದು ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯನ್ನು ತಡೆದು ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ರೈತರಾದ ಕೃಷ್ಣಾ ಚೌಡಾಳ ಎಲ್ಲಪ್ಪ ಗರಗದ, ಗಂಗಾಧರ ಮಳವಳ್ಳಿ, ಈರಣ್ಣ ಗಾಣಿಗೆರೆ, ನಾಗರಾಜ ಮಿಶ್ರಿಕೋಟಿ, ಮಲ್ಲಯ್ಯ ಪೂಜಾರ, ಶಂಕರ ಬಡಿಗೇರ, ಯಲ್ಲಪ್ಪ ತಿಮ್ಮಾಪೂರ, ಗಂಗಾಧರ ಬೆಂಡಲಗಟ್ಟಿ ಪಾಲ್ಗೊಂಡಿದ್ದರು.
ಅಖಂಡ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ, ಗ್ರಾಮ ಘಟಕದ ಅಧ್ಯಕ್ಷ ಕರೆಪ್ಪ ಆಲೂರ, ಬಸಲಿಂಗಪ್ಪ ನರಗುಂದ, ಗೋವಿಂದಪ್ಪ ವಾಲ್ಮೀಕಿ, ಮಂಜುನಾಥ ಕಂಕನವಾಡ ಸೇರಿದಂತೆ ಹಲವರು ಮಾತನಾಡಿದರು.