ರೈತರಲ್ಲಿ ಒಡೆದಾಳುವ ನೀತಿಯನ್ನು ಜಾರಿ ಮಾಡಿರುವ ಈ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಈ ಭಾಗದ ನಮ್ಮ ರೈತರಿಗೂ ದರ ನಿಗದಿ ವಿಚಾರದಲ್ಲಿ ಸಮಾನ ನ್ಯಾಯ ದೊರಕದಿದ್ದಲ್ಲಿ ಜಿಲ್ಲೆಯ ರೈತರು ಸಚಿವದ್ವಯರು ಹಾಗೂ ಜನಪ್ರತಿನಿಧಿಗಳನ್ನು ಹಾದಿ-ಬೀದಿಯಲ್ಲಿ ಘೇರಾವ್ ಹಾಕಲಾಗುತ್ತದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರದೆ ಜಿಲ್ಲೆಯ ರೈತರು ಬೆಳೆದ ಪ್ರತಿ ಟನ್ ಕಬ್ಬು ಬೆಳೆಗೂ 5500 ರು. ದರ ನಿಗದಿಪಡಿಸಬೇಕು ಹಾಗೂ ಭತ್ತ ಬೆಳೆದ ರೈತರ ಹಿತ ಕಾಯುವಂತೆ ಎಂದು ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು.ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಬುಧವಾರ ಸೇರಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೆಲ ತಾಸುಗಳ ಕಾಲ ಪ್ರತಿಭಟನಾ ಧರಣಿ ನಡೆಸಿದರು.
ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರಾಜ್ಯದ ರೈತರ ಕಬ್ಬು ಬೆಳೆಗೆ ದರ ನಿಗದಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಹೊಣೆಗಾರಿಕೆ ಹೊರದೆ ಪರಸ್ಪರ ಕೆಸರೆರೆಚಾಟ ಮಾಡಿಕೊಂಡು ನುಳುಚಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾದರೂ ರೈತರ ಬೆಳೆಗಳಿಗೆ ಅಗತ್ಯ ದರ ನಿಗದಿಯಾಗುತ್ತಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ಪ್ರಜ್ವಲಿಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಳಗಾವಿ ಭಾಗದ ರೈತರ ಹೋರಾಟ ತಗ್ಗಿಸುವ ಸಲುವಾಗಿ ಅಲ್ಲಿಯ ಉಸ್ತುವಾರಿ ಮಂತ್ರಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಆ ಭಾಗದಲ್ಲಿ ಮಾತ್ರ ಕಾರ್ಖಾನೆ ಮಾಲೀಕರು ಕಡುಗೂಲಿ ಹಾಗೂ ಒಡಗೂಲಿ ಕಳೆದು ಪ್ರತಿ ಟನ್ ಕಬ್ಬಿಗೆ 3600 ರು. ನೀಡುವುದಾಗಿ ಘೋಷಿಸಿದ್ದು, ಆದರೆ, ಮಂಡ್ಯ ಜಿಲ್ಲೆ ಸೇರಿದಂತೆ ದಕ್ಷಿಣ ಭಾಗದ ಕಬ್ಬು ಬೆಳೆಗಾರ ರೈತರಿಗೆ ಇದು ಅನ್ವಯವೇ ಆಗದೇ ಕಾರ್ಖಾನೆ ಮಾಲೀಕರು ಎಲ್ಲಾ ವೆಚ್ಚ ಸೇರಿ ಕೇವಲ 3300 ರು. ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ರೈತರಲ್ಲಿ ಒಡೆದಾಳುವ ನೀತಿಯನ್ನು ಜಾರಿ ಮಾಡಿರುವ ಈ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಈ ಭಾಗದ ನಮ್ಮ ರೈತರಿಗೂ ದರ ನಿಗದಿ ವಿಚಾರದಲ್ಲಿ ಸಮಾನ ನ್ಯಾಯ ದೊರಕದಿದ್ದಲ್ಲಿ ಜಿಲ್ಲೆಯ ರೈತರು ಸಚಿವದ್ವಯರು ಹಾಗೂ ಜನಪ್ರತಿನಿಧಿಗಳನ್ನು ಹಾದಿ-ಬೀದಿಯಲ್ಲಿ ಘೇರಾವ್ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಮಹಾಲಿಂಗು, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ದರಸಗುಪ್ಪೆ ಮಹೇಶ್, ನಾಗಣ್ಣ, ಜಯರಾಮು, ಚಾಮೇಗೌಡ, ಬಲ್ಲೇನಹಳ್ಳಿ ಮಹೇಶ್, ಚಂದಗಾಲು ಪುರುಷೋತ್ತಮ್, ಕೃಷ್ಣ, ರಾಮಚಂದ್ರು, ಶಂಕರ್, ಮೇಳಾಪುರ ಬಾಲು, ಕೆಂಪೇಗೌಡ, ರಾಮಕೃಷ್ಣ ಇತರರು ಭಾಗವಹಿಸಿದ್ದರು.