ರಾಜ್ಯ ಸರ್ಕಾರ ಒಂದು ವೇಳೆ ಕಬಿನಿ ಜಲಾಶಯದಿಂದ ನೀರು ಬಿಡಲು ಪ್ರಯತ್ನಿಸಿದರೆ, ಜಲಾಶಯವನ್ನು ರೈತರು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಚಳವಳಿ ನಡೆಸಬೇಕಾಗುತ್ತದೆ. ನ್ಯಾಯಾಲಯದ ಆದೇಶ ಬಂದ ತಕ್ಷಣ ತಮಿಳುನಾಡಿಗೆ ನೀರು ಬಿಡಲು ಇರುವ ಕಣಜವಲ್ಲ. ಮೂದಲು ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ಕುಡಿಯುವ ನೀರು ಹರಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಕಾವೇರಿ ನೀರು ನಿರ್ವಹಣಾ ಮಂಡಳಿಯ (ಸಿಡಬ್ಲ್ಯೂಆರ್‌ಸಿ) ತಮಿಳುನಾಡಿಗೆ ನೀರು ಬಿಡುವ ಆದೇಶ ಕಾವೇರಿ ಕೊಳ್ಳದ ರೈತರ ಪಾಲಿಗೆ ಮರಣ ಶಾಸನವಾಗಿದ್ದು, ಈ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿ ಕಬಿನಿ ರೈತ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಕಾಡಾ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟಿಸಿದರು.ರಸ್ತೆಯಲ್ಲೇ ಮಲಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ತಮಿಳುನಾಡು ಸರ್ಕಾರಕ್ಕೆ ಧಿಕ್ಕಾರ ಕೂಗಿದರು.
ರಾಜ್ಯ ಸರ್ಕಾರ ಒಂದು ವೇಳೆ ಕಬಿನಿ ಜಲಾಶಯದಿಂದ ನೀರು ಬಿಡಲು ಪ್ರಯತ್ನಿಸಿದರೆ, ಜಲಾಶಯವನ್ನು ರೈತರು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಚಳವಳಿ ನಡೆಸಬೇಕಾಗುತ್ತದೆ. ನ್ಯಾಯಾಲಯದ ಆದೇಶ ಬಂದ ತಕ್ಷಣ ತಮಿಳುನಾಡಿಗೆ ನೀರು ಬಿಡಲು ಇರುವ ಕಣಜವಲ್ಲ. ಮೂದಲು ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ಕುಡಿಯುವ ನೀರು ಹರಿಸಬೇಕು ಎಂದು ಒತ್ತಾಯಿಸಿದರು.ಅಂತರ್ಜಲ ವೃದ್ಧಿಗಾಗಿ ನೀರು ಹರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಏನಾದರೂ ರಾಹುಲ್ ಗಾಂಧಿಯ ಒತ್ತಡ. ತಮಿಳುನಾಡಿನ ರಾಜಕಾರಣಕ್ಕೆ ಮಣಿಯಬಾರದು. ಡಿ.ಕೆ. ಶಿವಕುಮಾರ್ ಅವರು ಮರುಳಾಗಿ ನೀರು ಬಿಡಲು ಹೊರಟರೆ ಡಿ.ಕೆ. ಶಿವಕುಮಾರ್ ತಮಿಳುನಾಡಿನ ನೀರು ಗಂಟಿ ಆದಂತೆ ಆಗುತ್ತದೆ ಎಂದು ಟೀಕಿಸಿದರು.
ಕದ್ದು ಮುಚ್ಚಿ ನೀರು ಬಿಡಲು ಪ್ರಯತ್ನಿಸಿದರೆ ಜು. 31ರಂದು ಮೈಸೂರಿಗೆ ಬರುವ ಮುಖ್ಯಮಂತ್ರಿಗೆ ಕಪ್ಪು ಮಸಿ ಬಳಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶ ಧಿಕ್ಕರಿಸಬೇಕು. ರಾಜ್ಯದಲ್ಲಿ ತೀವ್ರ ಬರಗಾಲದಿಂದ ಸಾಕಷ್ಟು ಮಳೆ ಬಾರದೆ ಜನ ಜಾನುವಾರಿಗೆ ಕುಡಿಯಲು ನೀರು ಸಿಗುತ್ತಿಲ್ಲ ಮತ್ತು ಕೆರೆಕಟ್ಟೆಗಳಿಗೆ ನೀರಿಲ್ಲ. ಅಂತರ್ಜಲ ಸಂಪೂರ್ಣವಾಗಿ ಕುಸಿದಿದೆ. 60 ವರ್ಷಗಳ ಇತಿಹಾಸದ ಬರಗಾಲದ ಛಾಯೆ ಈಗ ಆವರಿಸಿದೆ ಎಂದರು.
ಪ್ರತಿಭಟನೆಯಲ್ಲಿ ಕೆರೆಹುಂಡಿ ರಾಜಣ್ಣ, ಪ್ರಕಾಶ್ ಗಾಂಧಿ, ಜಿಲ್ಲಾಧ್ಯಕ್ಷ ನಾಗರಾಜ್, ವಳಗೆರೆ ಗಣೇಶ್, ಜೆಸಿಬಿ ಚಿದಂಬರ, ಮಲಿಯೂರು ಮಹೇಂದ್ರ, ಅಂಗಡಿ ಸತೀಶ್, ಮುಕುಡಹಳ್ಳಿ ರಾಜು, ಮುದ್ದಹಳ್ಳಿ ಮಧುಸೂಧನ್, ಹಂಚ್ಯಾ ದೇವರಾಜ್, ನಂದಿಗುಂದ ಸಿದಪ್ಪ, ನರಸಮಂಗಲ ನಾಗು, ಮಾದಾಪುರ ಕೆಂಪರಾಜ್, ಮೋಹನ್, ರಾಜೇಶ್, ದೇವಿರಮ್ಮನಹಳ್ಳಿ ಹುಂಡಿ ರೇವಣ್ಣ, ಹೊನ್ನೇಗೌಡನಹಳ್ಳಿ ಮಹೇಶ್, ಕೀಲಿಪುರ ಶ್ರೀಕಂಠ, ಊರ್ದಳ್ಳಿ ರಾಮಣ್ಣ ಮೊದಲಾದವರು ಪಾಲ್ಗೊಂಡಿದ್ದರು.