ಸಾರಾಂಶ
ಖಾಲಿ ಇರುವ ಚಿತ್ರಕಲಾ, ದೈಹಿಕ ಶಿಕ್ಷಣ, ಸಂಗೀತ ಮತ್ತು ರಂಗ ಕಲಾ ಶಿಕ್ಷಕರ ಖಾಯಂ ನೇಮಕಾತಿಗೆ ಆಗ್ರಹಿಸಿ ಮಂಗಳವಾರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.
- ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ನೇತೃತ್ವದಲ್ಲಿ ಡಿಸಿಗೆ ಮನವಿಕನ್ನಡಪ್ರಭ ವಾರ್ತೆ ಧಾರವಾಡ
ಖಾಲಿ ಇರುವ ಚಿತ್ರಕಲಾ, ದೈಹಿಕ ಶಿಕ್ಷಣ, ಸಂಗೀತ ಮತ್ತು ರಂಗ ಕಲಾ ಶಿಕ್ಷಕರ ಖಾಯಂ ನೇಮಕಾತಿಗೆ ಆಗ್ರಹಿಸಿ ಮಂಗಳವಾರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯ ಕಲಾವಿದರು ಹಾಗೂ ಹಾಲಭಾವಿ ಚಿತ್ರಕಲಾ ಶಾಲೆಯ ನಿವೃತ್ತ ಪ್ರಾಂಶುಪಾಲ ಸುರೇಶ ಹಾಲಬಾವಿ ಮಾತನಾಡಿ, ಚಿತ್ರಕಲೆ ಆದಿ ಕಾಲದಿಂದಲೂ ಇದೆ. ಇಂಥ ಕಲೆಗಳು ನಮ್ಮ ಮಕ್ಕಳಿಗೆ ಬೇಕು, ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಇಂಥ ಕಲೆಗಳು ಅವಶ್ಯಕ. ಈ ಪ್ರತಿಭಟನೆಗೆ ಸರ್ಕಾರ ಸ್ಪಂದಿಸಿ ಕೂಡಲೇ ಖಾಲಿ ಇರುವ ಎಲ್ಲ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಎಐಡಿವೈಒ ಜಿಲ್ಲಾಧ್ಯಕ್ಷ ಭವಾನಿ ಶಂಕರ್ ಗೌಡ ಮಾತನಾಡಿ, ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಔದ್ಯೋಗಿಕ ನೀತಿಗಳನ್ನು ಜಾರಿಗೆ ತರದಿರುವುದು ವಿಪರ್ಯಾಸ ಸಂಗತಿ. ಮುಖ್ಯವಾಗಿ ಪ್ರತೀ ವರ್ಷ ಕೋಟ್ಯಂತರ ಯುವಕರು ಈ ನಿರುದ್ಯೋಗದ ಪಡೆಗೆ ಸೇರಿಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಚಿತ್ರಕಲೆ, ದೈಹಿಕ ಶಿಕ್ಷಣ, ಸಂಗೀತ ಮತ್ತು ರಂಗಶಿಕ್ಷಣ ವಿಷಯಗಳಲ್ಲಿ ಪದವಿಗಳನ್ನು ಪಡೆದವರೂ ಸೇರಿದ್ದಾರೆ. ಇವರು ಅತ್ಯಂತ ಹೆಚ್ಚಿನ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ನಿರುದ್ಯೋಗದ ಬೇಗೆಯಲ್ಲಿ ಬೇಯುತ್ತಿದ್ದಾರೆ. ರಾಜ್ಯದಲ್ಲಿ ವಿಶೇಷ ಶಿಕ್ಷಕರ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಖಾಯಂ ಹುದ್ದೆಗಳನ್ನು ಭರ್ತಿ ಮಾಡದೆ ಗುತ್ತಿಗೆ ಆಧಾರದಲ್ಲಿ ಅಥವಾ ಅತಿಥಿಗಳ ರೂಪದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಇವರಿಗೆ ಉದ್ಯೋಗ ಭದ್ರತೆಯೂ ಇರುವುದಿಲ್ಲ, ಸಿಗುವ ಸಂಬಳವೂ ಕಡಿಮೆ. ಈ ಕನಿಷ್ಠ ವೇತನದಲ್ಲಿ ಇಂದಿನ ದುಬಾರಿ ಬೆಲೆ ಏರಿಕೆಯ ಬಿಸಿಗೆ ಗೌರವಯುತ ಜೀವನ ನಡೆಸುವುದು ದುಸ್ತರವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಬಸವರಾಜ ಕಲೆಗಾರ, ಅಯ್ಯಣ್ಣ ದೇಸಾಯಿ ಮಾತನಾಡಿದರು. ಪ್ರತಿಭಟನೆಯಲ್ಲಿ ಚಿತ್ರಕಲಾ, ದೈಹಿಕ ಶಿಕ್ಷಣ, ಸಂಗೀತ ಮತ್ತು ರಂಗ ಕಲಾ ವಿಭಾಗಗಳಿಂದ ಶ್ರೀಧರ್ ಮಾಂಡ್ರೆ, ಗುರುಬಸವ ಮಹಾಮನಿ, ಯಮನಪ್ಪ ಜಾಲಗಾರ, ಪ್ರದೀಪ ಬಾಡಸ್, ರಾಜೇಶ್, ಅರುಣ, ಚೇತನ್, ಬಸವರಾಜ ಮುಗದ, ಶರಣಪ್ಪ, ಅಕ್ಷಯ ತಳಕಲ್ಲ, ರಣಜಿತ್ ದುಪದ್, ಪ್ರೀತಿ ಸಿಂಗಾಡಿ ಇದ್ದರು.