ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರ ಆದೇಶ ಮಾಡಬೇಕು ಎಂದು ಆಗ್ರಹಿಸಿ ನಗರದ ಸಚಿವರ ಗೃಹ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.ನೌಕರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ ಮಾತನಾಡಿ, ರಾಜ್ಯದ ಎಲ್ಲಾ 31 ಕಂದಾಯ ಜಿಲ್ಲೆ, 3 ಶೈಕ್ಷಣಿಕ ಜಿಲ್ಲೆ ಹಾಗೂ 183 ತಾಲ್ಲೂಕುಗಳಲ್ಲಿ ಸಂಘದ ಶಾಖೆಗಳನ್ನು ಹೊಂದಿದ್ದು, 6 ಲಕ್ಷ ರಾಜ್ಯ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘಟನೆಯಾಗಿದೆ. ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಜಾರಿಗೊಳಿಸಬೇಕು. ಖಾಲಿ ಹುದ್ದೆ ಭರ್ತಿ ಮಾಡದ ಕಾರಣ ಸರ್ಕಾರಕ್ಕೆ 8500 ಕೋಟಿ ರು. ಉಳಿತಾಯವಾಗುತ್ತಿದೆ ಎಂದರು.
ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿ ಇವೆ. ಅದರೂ ಸರ್ಕಾರವು ಜನ ಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಜಾರಿಗೊಳಿಸುವ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯದ ಜೊತೆ ರಾಜ್ಯದ ಅಭಿವೃದ್ಧಿ ಸೂಚ್ಯಾಂಕದ ಬೆಳವಣಿಗೆಯಲ್ಲಿ ಹಾಗೂ ಜಿ.ಎಸ್.ಟಿ. ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಇಂತಹ ಕಾರ್ಯಾಂಗದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಪಂಜಾಬ್, ರಾಜಸ್ಥಾನ, ಚತ್ತಿಸ್‌ಘಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಹಾಗೆಯೇ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್) ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ 2.60 ಲಕ್ಷ ಖಾಲಿ ಹುದ್ದೆಗಳಿವೆ. ಹಾಲಿ ನೌಕರರಿಗೆ ಕಾರ್ಯಭಾರ ಹೆಚ್ಚಾಗಿ ಒತ್ತಡಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆರು ತಿಂಗಳಾದರೂ ವರದಿ ಪಡೆಯದ ಸರ್ಕಾರ ಆಯೋಗವನ್ನು ಎರಡು ಸಲ ಆರು ತಿಂಗಳ ಅವಧಿಗೆ ವಿಸ್ತರಿಸಿದೆ. ಈ ವರ್ಷ ಮಾರ್ಚ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಇದರೊಂದಿಗೆ ಆಯೋಗ ರಚನೆಯಾಗಿ 19 ತಿಂಗಳು ಕಳೆದಿವೆ. ಇದರ ಮಧ್ಯೆ ಸಂಘ ಕೈಗೊಂಡ ಮುಷ್ಕರದಿಂದಾಗಿ ಸರ್ಕಾರ ಶೇ 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೆ, ನೌಕರರ ಸಮ್ಮೇಳನದದಲ್ಲಿ ಮುಖ್ಯಮಂತ್ರಿ ನೀಡಿದ್ದ ವರದಿ ಅನುಷ್ಠಾನದ ಭರವಸೆ ಇನ್ನೂ ಈಡೇರಿಲ್ಲ ಎಂದು ದೂರಿದರು.
ರಾಜ್ಯ ಪರಿಕ್ಷತ್ ಸದಸ್ಯ ಶಾಂತರಡ್ಡಿ ತಂಬಿಗಿ ಮಾತನಾಡಿ, ಸರ್ಕಾರ 2017ರಲ್ಲೇ ವೇತನ ಆಯೋಗದ ವರದಿಯನ್ನು ಸಲ್ಲಿಸಿತ್ತು. ಅದನ್ನು 6 ತಿಂಗಳಲ್ಲೇ ಜಾರಿಯೂ ಮಾಡಲಾಗಿತ್ತು. ಆದರೆ ಅದು ಅನುಷ್ಠಾನಗೊಂಡು 5 ವರ್ಷವಾಗಿರುವುದರಿಂದ ನೌಕರರ ವೇತನ ಮತ್ತು ಭತ್ಯೆಗಳನ್ನು 2022 ಜುಲೈ ತಿಂಗಳಿಂದ ಪರಿಷ್ಕರಿಸಬೇಕಾಗಿತ್ತು ಎಂದರು.ಸಂಘದ ಒತ್ತಡದಿಂದಾಗಿ ಹಿಂದಿನ ಸರ್ಕಾರ ಅದೇ ವರ್ಷದ ನವೆಂಬರ್‌ನಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಿ, ಆರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿತ್ತು. ಆದರೂ ಅದು ಜಾರಿಗೆ ಬರಲಿಲ್ಲ. 7ನೇ ವೇತನ ಆಯೋಗ ಕೂಡಲೇ ಜಾರಿಗೊಳಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಂಘದ ಕಾರ್ಯದರ್ಶಿ ನಿಂಗಪ್ಪ ಪುರ್ಲೆ, ಖಜಾoಚಿ ಬಸನಗೌಡ ಬೆಳ್ಳಿಕಟ್ಟಿ, ಲಕ್ಷ್ಮಣ ಲಾಳಸೇರಿ, ಹಿರಿಯ ಉಪಾಧ್ಯಕ್ಷ ಭೀಮನಗೌಡ ಅಂಚೆಸೂಗೂರು, ಮಲ್ಲಪ್ಪ ಕಾಂಬಳೆ, ಜಾನ್ ರಾಜಕುಮಾರ್ ಸೇರಿದಂತೆ ವಿವಿಧ ಇಲಾಖೆಯ ನೌಕರರು ಭಾಗವಹಿಸಿದ್ದರು.