ಸಾರಾಂಶ
ಬಳ್ಳಾರಿ: ಇದೇ ತಿಂಗಳಿನಿಂದಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ಅತಿವೃಷ್ಟಿಯಿಂದಾದ ರೈತರ ಬೆಳೆಹಾನಿಗೆ ಕೂಡಲೇ ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಭತ್ತ ಬೆಳೆಯ ಕಟಾವು ಕಾರ್ಯ ಈಗಾಗಲೇ ಮುಗಿಯುತ್ತಿದ್ದು, ವಿಳಂಬ ಮಾಡದೆ ಜಿಲ್ಲಾಡಳಿತ ಭತ್ತ ಖರೀದಿ ಕೇಂದ್ರವನ್ನು ಆರಂಭಿಸಬೇಕು. ಆದಷ್ಟು ಶೀಘ್ರ ಖರೀದಿ ಕೇಂದ್ರಗಳನ್ನು ಆರಂಭಿಸುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ ರೈತರ ಉತ್ಪನ್ನಗಳು ಮಧ್ಯವರ್ತಿಗಳ ಪಾಲಾಗುತ್ತದೆ. ಸಂಕಷ್ಟದಲ್ಲಿರುವ ರೈತರು ಬೆಳೆ ಬರುತ್ತಿದ್ದಂತೆಯೇ ಮಾರಾಟ ಮಾಡಿಕೊಳ್ಳುವುದರಿಂದ ಖರೀದಿ ಕೇಂದ್ರದ ತುರ್ತು ಅಗತ್ಯವಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಜಿಲ್ಲೆಯಲ್ಲಿ ಸುರಿದ ಅತಿವೃಷ್ಟಿಯಿಂದ ಭತ್ತದ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆಹಾನಿಯಿಂದ ರೈತರು ಕಂಗಾಲಾಗಿದ್ದು, ರಾಜ್ಯ ಸರ್ಕಾರ ಬೆಳೆನಷ್ಟ ಪರಿಹಾರ ವಿತರಣೆಗೆ ಮುಂದಾಗಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್ ತಿಳಿಸಿದರು.ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ. ಕೃಷಿ ಕಾಯ್ದೆ ತಿದ್ದುಪಡಿ ಸೇರಿದಂತೆ ಅನೇಕ ನಿಲುವುಗಳ ಮೂಲಕ ಕೇಂದ್ರ ಸರ್ಕಾರ ದುಡಿವ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಎಐಕೆಕೆಎಂಎಸ್ ಸಂಘಟನೆಯಿಂದ ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ ಮಾತನಾಡಿದರು.ಬಳ್ಳಾರಿ ತಾಲೂಕು ಅಧ್ಯಕ್ಷ ಈರಣ್ಣ, ಕಾರ್ಯದರ್ಶಿ ಧನರಾಜ್, ಕುರುಗೋಡು ತಾಲೂಕು ಅಧ್ಯಕ್ಷ ಲಿಂಗಪ್ಪ, ಕಾರ್ಯದರ್ಶಿ ಕೆರೆಕೆರೆ ಬಸವರಾಜ್, ರೈತ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಜಿಲ್ಲಾ ಸದಸ್ಯರಾದ ಮಲ್ಲಪ್ಪ, ಮಾಬುಸಾಬ್, ಹೊನ್ನೂರಪ್ಪ, ಖಾಸೀಂಸಾಬ್, ಗಾದಿಲಿಂಗಪ್ಪ, ರಮೇಶ್, ಕಾಳಿಂಗಪ್ಪ, ದಸ್ತಗಿರಿ ಸಾಬ್, ನಾಗಭೂಷಣ, ನಾಯ್ಕಪ್ಪ, ಸಿದ್ದಪ್ಪ, ನಾಗರಾಜ, ಹುಲುಗಪ್ಪ, ಹುಸೇನ್‌ವಲಿ, ಗಡಿಗೆ ಚೆನ್ನಪ್ಪ, ಶಿವಲಿಂಗಪ್ಪ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ ಮೂಲಕ ಪ್ರಧಾನಮಂತ್ರಿಗೆ ಮನವಿಪತ್ರ ಸಲ್ಲಿಸಲಾಯಿತು. ಅಪರ ಜಿಲ್ಲಾಧಿಕಾರಿ ಮನವಿಪತ್ರ ಸ್ವೀಕರಿಸಿದರು.