ಸಾರಾಂಶ
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ಭತ್ತ ರಾಗಿ ಮತ್ತು ಜೋಳ ಖರೀದಿಸುವ ಪ್ರಕ್ರಿಯೆಯ ಗಡವು ಮುಗಿಯಲು ಕೇವಲ 15 ದಿನಗಳು ಬಾಕಿ ಉಳಿದಿದೆ.
ಬಳ್ಳಾರಿ: ಎಂಎಸ್‌ಪಿ ಯೋಜನೆಯಡಿ ಜೋಳ, ರಾಗಿ ಮತ್ತು ಭತ್ತ ಖರೀದಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ಭತ್ತ ರಾಗಿ ಮತ್ತು ಜೋಳ ಖರೀದಿಸುವ ಪ್ರಕ್ರಿಯೆಯ ಗಡವು ಮುಗಿಯಲು ಕೇವಲ 15 ದಿನಗಳು ಬಾಕಿ ಉಳಿದಿದೆ. ಇದುವರೆಗೂ ರಾಜ್ಯದಲ್ಲಿ ಖರೀದಿಯೇ ಆರಂಭವಾಗಿಲ್ಲ. ಇದರಿಂದ ಲಕ್ಷಾಂತರ ರೈತರು ಕಂಗಾಲಾಗಿದ್ದಾರೆ.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಿಸೆಂಬರ್ ಒಂದರಿಂದಲೇ ಖರೀದಿ ಕೇಂದ್ರಗಳನ್ನು ತೆರೆದು ರೈತರ ದತ್ತಾಂಶದ ಆಧಾರದಲ್ಲಿ ಭತ್ತ, ರಾಗಿ, ಬಿಳಿಜೋಳದ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಆದರೆ, ಜನವರಿ ಒಂದರಿಂದ ಈವರೆಗೆ ಖರೀದಿಗೆ ಚಾಲನೆಯೇ ನೀಡದಿರುವುದು ಆತಂಕ ಮೂಡಿಸಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್ ಹಾಗೂ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ಎಂಎಸ್‌ಪಿ ಯೋಜನೆಯಡಿ ಆಹಾರ ಧಾನ್ಯ ಮಾರಾಟ ಮಾಡಬೇಕೆಂದು ನೋಂದಣಿ ಮಾಡಿಸಿಕೊಂಡಿರುವ ರೈತರು ಖರೀದಿ ಆರಂಭವಾಗದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪದೇ ಪದೇ ಖರೀದಿ ಕೇಂದ್ರಗಳಿಗೆ ಹೋದರೂ ಮಾಹಿತಿ ಸಿಗುತ್ತಿಲ್ಲ ಎಂದು ತಿಳಿಸಿದರು.ಸಂಘಟನೆಯ ಕುರುಗೋಡು ತಾಲೂಕು ಅಧ್ಯಕ್ಷ ಲಿಂಗಪ್ಪ, ಕಾರ್ಯದರ್ಶಿ ಧನರಾಜ್, ಜಿಲ್ಲಾ ಸಮಿತಿ ಸದಸ್ಯರಾದ ಹೊನ್ನೂರಪ್ಪ, ದಸ್ತಗಿರಿ, ರಾಮಕೃಷ್ಣ ಸೇರಿದಂತೆ ಸಂಘಟನೆಯ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.