ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲೂಕಿನ ಮೇಲುಕೋಟೆ, ಚಿನಕುರಳಿ ಹೋಬಳಿ ಮತ್ತು ಮಂಡ್ಯ ತಾಲೂಕಿನ ಬಸರಾಳು ಹೋಬಳಿ ಪ್ರದೇಶದ ಜನರು ಹೇಮಾವತಿ ನದಿ ನೀರನ್ನು ಅವಲಂಬಿಸಿ ಬದುಕು ನಡೆಸುತ್ತಿದ್ದಾರೆ. ಮುಂಗಾರು ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿ ಕೆರೆ ಕಟ್ಟೆಗಳೆಲ್ಲ ಒಣಗಿ ಹೋಗಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹಾಗೂ ದಸಂಸ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಹೇಮಾವತಿ ನಾಲಾ ವ್ಯಾಪ್ತಿಯಲ್ಲಿ ನಾಲ್ವರು ಶಾಸಕರಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು.

ಮುಂಗಾರು ಮಳೆ ಕೊರತೆಯಿಂದ ಆವರಿಸಿದ್ದ ಬರದ ಛಾಯೆ ನಿಧಾನವಾಗಿ ಮರೆಯಾಗುತ್ತಿದೆ. ಜಲಾಶಯಗಳು ಮೈದುಂಬಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಪಡಿಸಿದರು.

ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲೂಕಿನ ಮೇಲುಕೋಟೆ, ಚಿನಕುರಳಿ ಹೋಬಳಿ ಮತ್ತು ಮಂಡ್ಯ ತಾಲೂಕಿನ ಬಸರಾಳು ಹೋಬಳಿ ಪ್ರದೇಶದ ಜನರು ಹೇಮಾವತಿ ನದಿ ನೀರನ್ನು ಅವಲಂಬಿಸಿ ಬದುಕು ನಡೆಸುತ್ತಿದ್ದಾರೆ. ಮುಂಗಾರು ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿ ಕೆರೆ ಕಟ್ಟೆಗಳೆಲ್ಲ ಒಣಗಿ ಹೋಗಿವೆ. ಹೊಸ ಬೆಳೆ ಬೆಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದರು.

ಇದೀಗ ಉತ್ತಮ ಮಳೆಯಿಂದ ಹೇಮಾವತಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ರೈತರಲ್ಲಿ ಬೆಳೆ ಹಾಕಿ ಬದುಕು ಕಟ್ಟಿಕೊಳ್ಳಬಹುದು ಎಂಬ ಆಶಾಭಾವನೆ ಮೂಡಿದೆ. ಆದರೆ, ಆಳುವ ಸರ್ಕಾರ, ಚುನಾಯಿತ ಜನಪ್ರತಿನಿಧಿಗಳು ಹೇಮಾವತಿ ಅಚ್ಚುಕಟ್ಟ ಪ್ರದೇಶದ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿದರು.

ಕಾವೇರಿ ವಿಚಾರವಾಗಿ ಮಾತ್ರ ಧ್ವನಿ ಎತ್ತುವ ಶಾಸಕರು, ಸಚಿವರು ಹೇಮಾವತಿ ಅಚ್ಚುಕಟ್ಟು ಪ್ರದೇಶದ ರೈತರ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ, ಶಾಸಕ ದರ್ಶನ್ ಪುಟ್ಟಣ್ಣಯ್ಯರಿಗೆ ವಿದೇಶ ಪ್ರವಾಸದ ಚಿಂತೆಯಾದರೆ, ಚಲುವರಾಯಸ್ವಾಮಿ ಅವರು ಮಂತ್ರಿಯಾಗುವ ಬ್ಯುಸಿಯಲ್ಲಿದ್ದರು. ಪಿ.ರವಿಕುಮಾರ್‌ಗೆ ಹೇಮಾವತಿ ಭಾಗದ ರೈತರ ಚಿಂತೆಬೇಕಾಗಿಲ್ಲ, ಕೆ.ಆರ್.ಪೇಟೆ ಶಾಸಕ ಮಂಜು ಅವರಿಗೆ ರೈತರ ಹಿತ ಕಾಯುವ ಮನಸ್ಸಿಲ್ಲ, ಇವರನ್ನು ನಂಬಿ ಓಟು ಕೊಟ್ಟ ಜನತೆಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಲೆಗಳಲ್ಲಿ ನೀರು ಹರಿಯದೆ ಕೆರೆ-ಕಟ್ಟೆಗಳು ನೀರಿಲ್ಲದೆ ಒಣಗಿವೆ. ಮುಂಗಾರು ಬೆಳೆಗೆ ರೈತರು ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಜನ-ಜನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ, ಜಲಾಶಯದಲ್ಲಿ ನೀರಿದ್ದರೂ ಸರ್ಕಾರ ಯಾವುದೇ ಕ್ರಮ ವಹಿಸದೆ ಇರುವುದರಿಂದ ರೈತರ ಬದುಕು ಶೋಚನೀಯವಾಗಿದೆ. ರೈತರ ಬೇಸಾಯಕ್ಕೆ ಅನುಕೂಲ ಮಾಡಿಕೊಡಲು ಮತ್ತು ಜನ-ಜನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು, ಜಮೀನಿನಲ್ಲಿ ರೈತರು ಬೆಳೆ ಹಾಕಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಕರವೇ ಜಿಲ್ಲಾಧ್ಯಕ್ಷ ಡಿ.ಅಶೋಕ್, ಕರವೇ ಮತ್ತು ದಸಂಸ ಮುಖಂಡರಾದ ರೇಣುಕಮ್ಮ, ಲತಾ, ನಾಗರಾಜು, ನಂದೀಶ್, ದರ್ಶನ್, ಆಟೋ ಚಂದ್ರು, ಎಂ.ವಿ. ಕೃಷ್ಣ, ಪ್ರದೀಪ್, ನಿರಂಜನ್‌ಭೌಧ, ಜಿಕೆ ಕುಮಾರ್, ಬೈರಾ, ಕರ್ನಾಟಕ ಸಂವಿಧಾನ ಸೇನೆಯ ಎಚ್.ಎನ್. ನರಸಿಂಹಮೂರ್ತಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.