ಕನ್ನಡಪ್ರಭ ವಾರ್ತೆ ಹಾಸನ
ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮುದಾಯದ ಪಾರಂಪರಿಕ ಉದ್ಯೋಗವಾದ ಕಲ್ಲು ಗಣಿಗಾರಿಕೆ ಸ್ಥಗಿತಗೊಂಡ ಪರಿಣಾಮ ನೂರಾರು ಕುಟುಂಬಗಳು ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಗಣಿಗಾರಿಕೆಯನ್ನು ಪುನರಾಂಭಿಸಲು ಅವಕಾಶ ನೀಡುವಂತೆ ಹಾಗೂ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಮಿಕರು ಒತ್ತಾಯಿಸಿ ನಗರದ ಡಿಸಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.ಕಲ್ಲು ಕುಟುಕರ ಸಂಘದ ಮಹದೇವ್ ಮಾಧ್ಯಮದೊಂದಿಗೆ ಮಾತನಾಡಿ, ಆಲೂರು ತಾಲೂಕಿನ ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯ ವೈ.ಎನ್. ಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಾಗಿರುವ ಸುಮಾರು ೨೫೦ರಿಂದ ೩೦೦ ಮಂದಿ ಭೋವಿ ಸಮುದಾಯದವರು ಸ್ವಾವಲಂಬಿ ಬದುಕಿಗಾಗಿ ಮಗ್ಗೆ ಗ್ರಾಮದ ಸರ್ವೆ ನಂ.೧೫೧ರ ಸರ್ಕಾರಿ ಗೋಮಾಳದ ೩ ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು. ಈ ಕೆಲಸವು ಕೇವಲ ಉದ್ಯೋಗವಲ್ಲದೆ, ತಲೆಮಾರುಗಳಿಂದ ಬಂದಿರುವ ಅವರ ಪಾರಂಪರಿಕ ಕುಲಕಸುಬಾಗಿದ್ದು, ಇದೇ ಆಧಾರವಾಗಿ ಬದುಕು ಕಟ್ಟಿಕೊಂಡಿದ್ದಾರೆ. ಭೋವಿ ಸಂಘವನ್ನು ಸ್ಥಾಪಿಸಿ, ಅಧ್ಯಕ್ಷ ಮಂಜೇಶ್ ಅವರ ನೇತೃತ್ವದಲ್ಲಿ ೨೦ ವರ್ಷಗಳ ಗುತ್ತಿಗೆ ಪಡೆದುಕೊಂಡು ಸುಮಾರು ೬೦ರಿಂದ ೭೦ ಮಂದಿ ಕಾರ್ಮಿಕರು ಸುತ್ತಿಗೆ,ಗುಳಿ, ಚಮಟಿಗೆ ಉಪಯೋಗಿಸಿ ಕಲ್ಲು ಒಡೆದು ಜೀವನ ಸಾಗಿಸುತ್ತಿದ್ದಾರೆ. ಇವರನ್ನು ಅವಲಂಬಿಸಿರುವ ಸುಮಾರು ೨೦೦ರಿಂದ ೨೫೦ ಕುಟುಂಬಗಳ ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ದಿನನಿತ್ಯದ ಬದುಕು ಇದೇ ಉದ್ಯೋಗದ ಮೇಲೆ ಅವಲಂಬಿತವಾಗಿದೆ. ಇವರಲ್ಲಿ ಬಹುತೇಕರು ಸ್ವಂತ ಕೃಷಿಭೂಮಿಯಿಲ್ಲದೆ ಸಂಪೂರ್ಣವಾಗಿ ಈ ಕೆಲಸದ ಮೇಲೆಯೇ ಅವಲಂಬಿತರಾಗಿದ್ದಾರೆ ಎಂದರು. ಹೊಸಮಠ ಗ್ರಾಮದ ಕೆಲವರು ದೇವಸ್ಥಾನ ನಿರ್ಮಾಣದ ಹೆಸರಿನಲ್ಲಿ ಹಣ ಹಾಗೂ ಮಾಮೂಲು ಬೇಡಿಕೆ ಇಟ್ಟು, ನೀಡದ ಹಿನ್ನೆಲೆಯಲ್ಲಿ ಸುಳ್ಳು ಆರೋಪಗಳನ್ನು ಮಾಡುತ್ತ ಗಣಿಗಾರಿಕೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕಾರ್ಮಿಕರು ದೂರಿದ್ದಾರೆ. ಈ ಹಿಂದೆ ಒಂದು ಬಾರಿ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸಂಬಂಧಿತ ಇಲಾಖೆಗಳು ಪರಿಶೀಲನೆ ನಡೆಸಿ ಯಾವುದೇ ಅಕ್ರಮಗಳು ನಡೆದಿಲ್ಲವೆಂದು ತಿಳಿದುಬಂದ ನಂತರ ಪುನಃ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು. ಆದರೆ, ಗಣಿಗಾರಿಕೆ ಪುನರ್ ಆರಂಭವಾದ ಬಳಿಕವೂ ಮತ್ತೆ ಅದೇ ಗುಂಪು ದಬ್ಬಾಳಿಕೆ, ಹಲ್ಲೆ, ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡುವುದರ ಮೂಲಕ ಕಾರ್ಮಿಕರಿಗೆ ತೊಂದರೆ ನೀಡುತ್ತಿರುವುದಾಗಿ ಆರೋಪಿಸಲಾಗಿದೆ. ಸುಳ್ಳು ಆರೋಪಗಳನ್ನು ಮುಂದಿರಿಸಿ ಪ್ರತಿಭಟನೆಗಳ ಮೂಲಕ ಒತ್ತಡ ತಂದು ಮತ್ತೆ ಗಣಿಗಾರಿಕೆಯನ್ನು ನಿಲ್ಲಿಸಲು ಪ್ರಯತ್ನಿಸಲಾಗಿದೆ ಎಂದು ದೂರಿದರು. ಈ ಒತ್ತಡದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗಣಿಗಾರಿಕೆಗೆ ತಾತ್ಕಾಲಿಕ ನಿಷೇಧ ಹೇರಿರುವುದು ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ತನಿಖೆ ನಡೆಸಿ ಯಾವುದೇ ತಪ್ಪಿಲ್ಲವೆಂದು ದೃಢಪಟ್ಟಿರುವ ಸಂದರ್ಭದಲ್ಲಿ ಮತ್ತೆ ವರದಿ ಕೇಳುವುದು ಅನಾವಶ್ಯಕ ಹಾಗೂ ಅವೈಜ್ಞಾನಿಕ ಕ್ರಮ ಎಂದು ಹೇಳಿದರು. ನಾವು ಯಾರ ಬಳಿಯೂ ಕೈ ಚಾಚದೆ ಸ್ವಾವಲಂಬಿಯಾಗಿ ಬದುಕಲು ಈ ಉದ್ಯೋಗವನ್ನು ಅವಲಂಬಿಸಿದ್ದೇವೆ. ಆದರೆ ನಿರಂತರ ಅಡ್ಡಿಪಡಿಸುವಿಕೆಯಿಂದ ನಮ್ಮ ಜೀವನ ಅಸ್ಥಿರವಾಗಿದೆ. ನಮ್ಮ ಮಕ್ಕಳ ಭವಿಷ್ಯ ಕತ್ತಲೆಯಲ್ಲಿದೆ” ಎಂದು ಕಾರ್ಮಿಕರು ಕಳವಳ ವ್ಯಕ್ತಪಡಿಸಿದ್ದಾರೆ.ತಕ್ಷಣವೇ ತಾತ್ಕಾಲಿಕ ನಿಷೇಧವನ್ನು ಹಿಂಪಡೆದು ಗಣಿಗಾರಿಕೆಯನ್ನು ಪುನರ್ ಆರಂಭಿಸಲು ಅವಕಾಶ ನೀಡಬೇಕು. ಜೊತೆಗೆ, ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ನಮ್ಮ ಜೀವಿತಕ್ಕೆ ಭದ್ರತೆ ಒದಗಿಸಬೇಕು ಎಂದು ಭೋವಿ ಸಮುದಾಯದವರು ಒಕ್ಕೊರಲಿನಿಂದ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಮನವಿ ಮಾಡಿದರು.ಧರಣಿಯಲ್ಲಿ ಕಲ್ಲು ಕುಟಕರ ಸಂಘದ ನಂದೀಶ್, ಆರ್‍ಮುಗ್, ಸರೋಜ, ಅಂಬಿಕಾ ಇತರರು ಉಪಸ್ಥಿತರಿದ್ದರು.