ಸಾಗರ ತಾಲೂಕಿನ ಆನಂದಪುರ ಹೋಬಳಿಯ ಆಚಾಪುರ-ಮುರುಘಾಮಠ, ಯಡೇಹಳ್ಳಿ, ಮಲಂದೂರು, ದಾಸಕೊಪ್ಪ, ತಳಗೆರಿ ಗ್ರಾಮಗಳಲ್ಲಿ ಅನಾದಿ ಕಾಲದಿಂದ ವಾಸ ಮಾಡುತ್ತಿರುವ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಗುರುವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸಾಗರ: ತಾಲೂಕಿನ ಆನಂದಪುರ ಹೋಬಳಿಯ ಆಚಾಪುರ-ಮುರುಘಾಮಠ, ಯಡೇಹಳ್ಳಿ, ಮಲಂದೂರು, ದಾಸಕೊಪ್ಪ, ತಳಗೆರಿ ಗ್ರಾಮಗಳಲ್ಲಿ ಅನಾದಿ ಕಾಲದಿಂದ ವಾಸ ಮಾಡುತ್ತಿರುವ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಗುರುವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸಾಗರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಎದುರಿನಿಂದ ಮೆರವಣಿಗೆ ಮೂಲಕ ಸಾಗಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಚ್. ಹಾಲಪ್ಪ ಮಾತನಾಡಿ, ಆನಂದಪುರ ಹೋಬಳಿಯ ನಾಲ್ಕು ಗ್ರಾಮ ಪಂಚಾಯ್ತಿಯ ನಾಲ್ಕು ಗ್ರಾಮಗಳ ಬಡ ಕುಟುಂಬ ಹಲವು ದಶಕಗಳಿಂದ ಇಲ್ಲಿ ಬದುಕು ಕಟ್ಟಿಕೊಂಡಿದೆ. ಅದರೆ ಈ ಕುಟುಂಬಗಳ ಹೆಸರಿಗೆ ಹಕ್ಕುಪತ್ರ ನೀಡಿಲ್ಲ. ಯಾರು ಭೂಮಿಯಲ್ಲಿ ವಾಸವಿದ್ದಾರೋ ಅವರಿಗೆ ಭೂಮಿಹಕ್ಕು ಸಿಗಬೇಕಾದದ್ದು ನ್ಯಾಯಸಮ್ಮತ. ಉಳುವವನೇ ಹೊಲದೊಡೆಯ ಮೂಲತತ್ವಕ್ಕೆ ಅನುಗುಣವಾಗಿ ಬಡವರಿಗೆ ಜಮೀನು ಸಿಗಬೇಕು. ದಾಖಲೆಯಲ್ಲಿ ಖಾಸಗಿ ಜಮೀನು ಎಂದು ಹೇಳುತ್ತಿದ್ದರೂ, ಅಲ್ಲಿ ನೀವು ಹಲವು ವರ್ಷಗಳಿಂದ ವಾಸವಿದ್ದು, ನಿಮಗೆ ೯೪ಡಿ ಅಡಿ ಖಾಸಗಿ ಜಾಗದಿಂದ ನಿಮ್ಮ ಹೆಸರಿಗೆ ಭೂಮಿ ವರ್ಗಾವಣೆ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಸರ್ಕಾರ ಈ ಭೂಮಿಯನ್ನು ವಶಪಡಿಸಿಕೊಂಡು ನಂತರ ನಿಮ್ಮ ಹೆಸರಿಗೆ ಹಕ್ಕುಪತ್ರ ಕಾನೂನು ಪ್ರಕಾರ ನೀಡಬೇಕು. ನಿಮ್ಮ ಬೇಡಿಕೆ ಈಡೇರಿಕೆಗೆ ಪೂರಕವಾಗಿ ರೂಪಿಸಿಕೊಂಡು ಬರುವ ಎಲ್ಲಾ ಹೋರಾಟಕ್ಕೂ ನಮ್ಮ ಬೆಂಬಲವಿದೆ ಎಂದು ಹೇಳಿದರು.ಹೋರಾಟದ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಅನೇಕ ವರ್ಷಗಳಿಂದ ನಾಲ್ಕು ಗ್ರಾಮ ಪಂಚಾಯ್ತಿ ಜನರು ಭೂಮಿಹಕ್ಕಿಗಾಗಿ ಸರ್ಕಾರದ ಬಾಗಿಲು ಬಡಿಯುತ್ತಿದ್ದಾರೆ. ಅದರೆ ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ. ಬಡವರು, ಕೂಲಿಕಾರ್ಮಿಕರು ಈ ಭೂಮಿಯಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ಭೂಮಿ ಮಂಜೂರು ಮಾಡಿಕೊಟ್ಟರೆ ಯಾವುದೇ ಲಾಭ ಇಲ್ಲ ಎನ್ನುವ ಧೋರಣೆ ಕೈಬಿಡಿ. ಭೂಹಕ್ಕಿಗಾಗಿ ಎದುರು ನೋಡುತ್ತಿರುವ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡಿ. ನಿಗದಿತ ಅವಧಿಯಲ್ಲಿ ಹಕ್ಕುಪತ್ರ ನೀಡದೆ ಹೋದಲ್ಲಿ ಅಹೋರಾತ್ರಿ ಹೋರಾಟ ರೂಪಿಸಲಾಗುತ್ತದೆ ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರವಿಕುಗ್ವೆ ಮಾತನಾಡಿದರು. ರೇವಪ್ಪ ಎಚ್. ಹೊಸಕೊಪ್ಪ, ಭರ್ಮಪ್ಪ ಅಂದಾಸುರ, ವೀರೇಶ್ ಕುಮಾರ್, ದೇವೇಂದ್ರಪ್ಪ, ಗಣೇಶ್ ಪ್ರಸಾದ್, ರಾಜು ದೇವಾಡಿಗ, ಕುಮಾರಸ್ವಾಮಿ ಕೊಪ್ಪ, ಕನ್ನಪ್ಪ ಬೆಳಲಮಕ್ಕಿ, ಜಗನ್ನಾಥ್, ಉಮಾ ಇನ್ನಿತರರು ಹಾಜರಿದ್ದರು.