ರೈತರನ್ನು ಬೆಳೆಸಾಲದಿಂದ ಮುಕ್ತಗೊಳಿಸಲು ಆಗ್ರಹಿಸಿ ಪ್ರತಿಭಟನೆ

| Published : Mar 29 2024, 12:52 AM IST

ರೈತರನ್ನು ಬೆಳೆಸಾಲದಿಂದ ಮುಕ್ತಗೊಳಿಸಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸತತ ಬರಗಾಲದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದರೂ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ.

ಬಳ್ಳಾರಿ: ದೀರ್ಘಾವಧಿಯಿಂದ ಬಾಕಿ ಇರುವ ಬೆಳೆ ಸಾಲವನ್ನು ಏಕಗಂಟಿನ ತೀರುವಳಿ (ಒಟಿಎಸ್‌) ಮೂಲಕ ಇತ್ಯರ್ಥ ಪಡಿಸಬೇಕು. ಈ ಮೂಲಕ ಅನ್ನದಾತರನ್ನು ಸಾಲಮುಕ್ತರನ್ನಾಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕರೂರು ಮಾಧವರೆಡ್ಡಿ ನೇತೃತ್ವದಲ್ಲಿ ನೂರಾರು ರೈತರು ಇಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪ್ರಧಾನ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಸತತ ಬರಗಾಲದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದರೂ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಬೆಳೆಸಾಲಕ್ಕೆ ಅತ್ಯಂತ ಅವೈಜ್ಞಾನಿಕವಾಗಿ ಬಡ್ಡಿ ಹಾಕಲಾಗಿದೆ. ಸಾಲ ತೀರಿಸದ ರೈತರ ಆಸ್ತಿ ಜಪ್ತಿ ಮಾಡುವುದಾಗಿ ಬ್ಯಾಂಕುಗಳು ರೈತರಿಗೆ ನೊಟೀಸ್ ನೀಡುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು. ನೇನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯಾಧ್ಯಕ್ಷ ಕರೂರು ಮಾಧವರೆಡ್ಡಿ ಮಾತನಾಡಿ, ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಗ್ರಾಮೀಣ ಬ್ಯಾಂಕ್ ರೈತರನ್ನು ಹೇಗೆ ಮೋಸಗೊಳಿಸುತ್ತಿದೆ ಎಂಬುದನ್ನು ಈಗಾಗಲೇ ನಾವು ನಿರೂಪಿಸಿದ್ದೇವೆ. ಕಳೆದ 2000ನೇ ಸಾಲಿನಲ್ಲಿ ₹1.50 ಲಕ್ಷ ಸಾಲ ಪಡೆದ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮದ ರೈತ ವೈ. ನಾಗರಾಜ್ ಎಂಬವರಿಗೆ ₹22.83 ಲಕ್ಷ ಸಾಲ ಕಟ್ಟಬೇಕು ಎಂದು ಬ್ಯಾಂಕ್ ಸೂಚಿಸಿದೆ.ಈ ರೀತಿಯಾಗಿ ಅನೇಕ ರೈತರಿಗೆ ಬ್ಯಾಂಕ್ ಮೋಸಗೊಳಿಸಿದೆ. ಮೂರುವರ್ಷ ಸಾಲ ಮರುಪಾವತಿ ಮಾಡದಿದ್ದಲ್ಲಿ ಎನ್‌ಪಿಎ ಮಾಡಬೇಕು ಎಂಬ ರಿಜರ್ವ್ ಬ್ಯಾಂಕ್ ನಿಯಮವಿದೆ. ಆದರೆ, ಇದ್ಯಾವುದನ್ನು ಪರಿಗಣಿಸದ ಬ್ಯಾಂಕ್, ರೈತರಿಗೆ ಸಾಲ ಕಟ್ಟುವಂತೆ, ಇಲ್ಲದಿದ್ದರೆ ಆಸ್ತಿ ಜಪ್ತಿ ಮಾಡುವುದಾಗಿ ನೊಟೀಸ್ ನೀಡುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಜಿಲ್ಲೆಯ ವಿವಿಧೆಡೆಗಳಲ್ಲಿ ಎತ್ತಿನಬಂಡಿಗಳೊಂದಿಗೆ ನಗರಕ್ಕೆ ಆಗಮಿಸಿದ್ದ ರೈತರು, ರಸ್ತೆಯಲ್ಲಿ ಎತ್ತಿನ ಬಂಡಿಗಳನ್ನು ಬಿಟ್ಟು ಪ್ರತಿಭಟಿಸಿದರು. ಸುಡುಬಿಸಿಲನ್ನು ಲೆಕ್ಕಿಸದೆ ನೂರಾರು ರೈತರು ಬ್ಯಾಂಕ್ ಮುಂಭಾಗದ ರಸ್ತೆಯ ಮಧ್ಯದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿ, ಬ್ಯಾಂಕ್ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಾಗನೂರು-ಸಿರಿವಾರ ರೈತ ಹೋರಾಟ ಸಮಿತಿಯ ಮುಖಂಡ ಹಾಗೂ ಹಿರಿಯ ವಕೀಲ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಅವರು ಬ್ಯಾಂಕ್ ಆಡಳಿತ ಮಂಡಳಿಯ ರೈತ ವಿರೋಧಿ ನಿಲುವುಗಳನ್ನು ಖಂಡಿಸಿದರು. ಸಂಘಟನೆಯ ಜಿಲ್ಲಾ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.