ಸಾರಾಂಶ
ಹಾವೇರಿ: ಹಾವೇರಿ ಜಿಲ್ಲೆಯಾಗಿ ೨೭ ವರ್ಷಗಳಾದರೂ ಜ್ವಲಂತ ಸಮಸ್ಯೆಗಳು ಬಗೆಹರಿದಿಲ್ಲ. ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಜಿಲ್ಲೆಯು ಹಿಂದುಳಿಯಲು ಕಾರಣವಾಗಿದೆ. ಜಿಲ್ಲೆಗೆ ಮೂಲಸೌಲಭ್ಯ ಕಲ್ಪಿಸಿ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿಯು ಪ್ರತಿಭಟನೆ ನಡೆಸಿತು.ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷ ನಿಂಗರಾಜಗೌಡ್ರು ಮಾತನಾಡಿ, ಹಾವೇರಿ ಜಿಲ್ಲೆಯು ನಿರ್ಮಾಣಗೊಂಡು ೨೭ ವರ್ಷಗಳ ಕಾಲ ಗತಿಸಿದರೂ ಸಹ ಜಿಲ್ಲೆಯ ಹಲವಾರು ಸಮಸ್ಯೆಗಳು ಬಗೆಹರೆಯದೇ ಹಾಗೆ ಉಳಿದುಕೊಂಡಿರುತ್ತವೆ. ಒಟ್ಟು ೮ ತಾಲೂಕುಗಳನ್ನು ಹೊಂದಿರುವ ಜಿಲ್ಲೆಯು ಪ್ರಮುಖವಾಗಿ ಕೃಷಿ ಆಧಾರಿತ ಜಿಲ್ಲೆಯಾಗಿದೆ. ಕಾರಣ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಿಲ್ಲೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದು ಎಂದು ದೂರಿದರು. ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ರಾಮು ತಳವಾರ ಮಾತನಾಡಿ, ಜಿಲ್ಲೆಯಲ್ಲಿ ಪ್ರಮುಖವಾಗಿ ಕೃಷಿಯು ಪ್ರಮುಖ ಕಸುಬಾಗಿರುವುದರಿಂದ ಈ ಭಾಗದಲ್ಲಿ ಹತ್ತಿ, ಮೆಕ್ಕೆಜೋಳ, ಸೋಯಾಬಿನ್, ಶೇಂಗಾ, ಭತ್ತ, ಅಡಿಕೆ, ತೆಂಗು, ಕಬ್ಬು, ಮಾವು, ಬಾಳೆ ಮುಂತಾದ ವಾಣಿಜ್ಯ ಬೆಳೆಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದ ಪೂರಕ ಕಾರ್ಖಾನೆಗಳನ್ನು ನಿರ್ಮಾಣ ಮಾಡುವುದು ಅಗತ್ಯವಿದೆ. ಜಿಲ್ಲಾ ಆಸ್ಪತ್ರೆಯು ಸಾರ್ವಜನಿಕರಿಂದ ಪ್ರತಿನಿತ್ಯ ತುಂಬಿ ತುಳುಕುತ್ತಿದ್ದು ಪ್ರತ್ಯೇಕವಾಗಿ ಜಾಗೆಯನ್ನು ಗುರುತಿಸಿ ಬೃಹತ್ ಜಿಲ್ಲಾಸ್ಪತ್ರೆ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು.ರಾಜ್ಯ ಉಪಾಧ್ಯಕ್ಷ ಸಂತೋಷಗೌಡ್ರ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸುವರ್ಣಮ್ಮ, ಎಂ.ಕೆ. ತಿಮ್ಮಾಪುರ, ಅನುರಾಧಾ, ಸುಮಾ ಪುರದ, ಪ್ರೇಮಾ ಮುದಿಗೌಡ್ರ, ಶಿವಪ್ಪ ಬೆಳಲಕೊಪ್ಪ, ಬಸವಣ್ಣೆಯ್ಯ ಬಸಾಪುರಮಠ, ಸುರೇಶ ಗಾಂಧಿ, ಮಂಡ್ಯ ರವಿ, ಶ್ರೀನಿವಾಸ ನಾಯ್ಕ, ಎಚ್.ರಾಮು, ಶಿವಾನಂದ ಮುದ್ದಿ, ಉಮೇಶ ಮುದಿಗೌಡ್ರ, ಮಂಜುನಾಥ ದಾನಪ್ಪನವರ, ವೀರೇಶ ಹಡಪದ, ಕರಿಬಸಪ್ಪ ಗೂಳಣ್ಣನವರ, ವಿನಯ ಭೂಶೆಟ್ಟಿ ಇತರರು ಇದ್ದರು.