ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸುವರ್ಣ ವಿಧಾನಸೌಧದ ಬಳಿ ಬುಧವಾರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ 12ಕ್ಕೂ ಹೆಚ್ಚು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದಿವೆ.ಸುಪ್ರೀಂಕೋರ್ಟ್ ಆದೇಶದಂತೆ 2023ರ ಎಪ್ರಿಲ್ ನಂತರ ನಿವೃತ್ತಿಯಾದವರಿಗೆ ಗ್ರಾಚ್ಯೂಟಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ 49 ಅಲೆಮಾರಿ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ವಕ್ಫ್ ಬೋರ್ಡ್ ಸ್ಥಾಪಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಅಂಜುಮನ್ ಇ ಇಸ್ಲಾಂ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಹುಬ್ಬಳ್ಳಿ ಏರ್‌ಪೋರ್ಟ್ ಹತ್ತಿರ ಹಜ್‌ಭವನ ನಿರ್ಮಿಸಬೇಕು. ಹಾವೇರಿ, ಕೊಪ್ಪಳ ಅಥವಾ ಬೀರದಲ್ಲಿ ಉರ್ದು ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಲಾಯಿತು.ಅತಿ ಶೀಘ್ರದಲ್ಲಿ ಅತಿಥಿ ಉಪನ್ಯಾಸಕರ ಜನರಲ್ ಕೌನ್ಸಲಿಂಗ್ ಮಾಡುವುದು, ಕೌನ್ಸಲಿಂಗ್‌ನಿಂದ ಹೊರಗುಳಿದ ಅತಿಥಿ ಉಪನ್ಯಾಸಕರಿಗೆ ಗೌರವ ಧನ ನೀಡಬೇಕು. ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.ಕರ್ನಾಟಕ ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಬೆಳಗಾವಿ ಸೇರಿದಂತೆ ಮತ್ತಿತರ ಜಿಲ್ಲೆಗಳ ರೈತರ ವಿವಿಧ ಬೇಡಿಕೆಗಳ ಒತ್ತಾಯಿಸಿ ನೇಗಿಲ ಯೋಗಿ ರೈತ ಸೇವಾ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.ಬಿಪಿಎಲ್ ಕಾರ್ಡ್‌ಗಳ ರದ್ಧತಿ ವಿರೋಧಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟಿಸಲಾಯಿತು. ಪಿಟಿಸಿಎಲ್ ಕಾಯ್ದೆ ಸಮಗ್ರ ತಿದ್ದುಪಡಿ ಮಾಡಬೇಕು. ಪರಿಶಿಷ್ಟರ ಅಭಿವೃದ್ಧಿ ಯೋಜನೆಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಕಾಯ್ದಿರಿಸಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರುಪಯೋಗ ಪಡಿಸಿಕೊಂಡಿದ್ದನ್ನು ಮರಳಿಸಬೇಕು. ಸ್ಲಂ ಕೊಳಚೆ ವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಬಾಬಾಸಾಹೇಬ್ ಅಂಬೇಡ್ಕರ್‌ರು ಭೇಟಿ ನೀಡಿದ ನಾಗಸೇನಾ ಬೌದ್ಧ ವಿಹಾರ ಸೇರಿದಂತೆ 10 ಸ್ಥಳಗಳನ್ನು ಸ್ಮಾರಕವಾಗಿಸಲು ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಲಾಯಿತು. ₹31 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ವತಿಯಿಂದ ಪ್ರತಿಭಟಿಸಲಾಯಿತು. ನಿವೃತ್ತಿ , ಮರಣ ನಂತರ ಕುಟುಂಬಕ್ಕೆ₹ 6 ಸಾವಿರ ಪಿಂಚಣಿ ನೀಡಬೇಕು.ಡಾಟಾ ಅಪರೇಟ್‌ಗಳಿಗೆ ಅನುಮೋದನೆ ನೀಡುವಂತೆ ಆಗ್ರಹಿಸಲಾಯಿತು.ಮಾಸಿಕ ಗೌರವ ಧನ ಹೆಚ್ಚಳ ಮಾಡುವುದು, ನಿಯಮಿತವಾಗಿ ಪ್ರತಿತಿಂಗಳು ಗೌರವ ಧನ ನೀಡುವುದು, ನೇಮಕಾತಿ ವೇಳೆ ಸೇವಾ ಅನುಭವ ಶಿಕ್ಷಕರನ್ನು ಪರಿಗಣಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರು ಪ್ರತಿಭಟನೆ ನಡೆಸಿದರು.ಪಾರಂಪರಿಕ ವೈದ್ಯ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಪಾರಂಪರಿಕ ವೈದ್ಯರು ಪ್ರತಿಭಟನೆ ನಡೆಸಿದರು.
ಮುಂದುವರೆದ ಜಾತಿಗಳನ್ನು ಯಾವುದೇ ಕಾರಣಕ್ಕೂ 2ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಪ್ರತಿಭಟಿಸಲಾಯಿತು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡುಗೆ, ಅಡುಗೆ ಸಹಾಯಕರು, ಸ್ವಚ್ಛಾಗಾರರು, ಕಾವಲುಗಾರರು, ಡಿ.ಗ್ರೂಪ್, ಟೆಂಡರರ್, ಕಂಪ್ಯೂಟರ್ ಅಪರೇಟರ್, ಡಾಟಾ ಎಂಟ್ರಿ ಆಪರೇಟರ್ ಆಶ್ರಯ ಶಾಲಾ ಶಿಕ್ಷಕರ ಸಂಬಳ ಹೆಚ್ಚಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರರು ಪ್ರತಿಭಟಿಸಿದರು. ಖನಿಜ ಸಾಗಾಣಿಕೆ ಪರವಾಣಿಗೆ ಪಡೆದು ಅದರ ನೈಜತೆಯನ್ನು ಜಿಲ್ಲಾ ಗಣಿ ಭೂ ವಿಜ್ಞಾನ ಇಲಾಖೆಯಿಂದ ಪರಿಶೀಲಿಸಿದ ನಂತರವೇ ಕಾಮಗಾರಿಗಳ ಬಿಲ್‌ಗಳನ್ನು ಬಿಡುಗಡೆ ಮಾಡಬೇಕು. ಅನಗತ್ಯ ಅರ್ಹತಾ ಮಾನದಂಡ ಹಾಗೂ ನಿಯಮಗಳನ್ನು ಹೇಳಿ ಸ್ಥಳೀಯ ಬಿಟ್ಟಿು ಬೇರೆ ರಾಜ್ಯದವರಿಗೆ ಕಾಮಗಾರಿ ನೀಡಲಾಗುತ್ತಿದೆ. ರಾಜ್ಯದ ಸಾಮಾನ್ಯ, ಪರಿಶಿಷ್ಟಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಕೆಲಸ ಸಿಗದೇ ಅನ್ಯಾಯವಾಗುತ್ತಿದೆ. ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.