ರಾಜ್ಯ ಸರ್ಕಾರ ಸಾಮಾನ್ಯ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ 25396 ಕೋಟಿ ಹಣವನ್ನು ಎಸ್.ಸಿ.ಎಸ್.ಪಿ, ಟಿಎಸ್‌ಪಿ ಯೋಜನೆಗೆ ಹಿಂದಿರುಗಿಸಬೇಕು. ದಲಿತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಎದುರಾಗಿರುವ ಸಮಸ್ಯೆ-ಸವಾಲುಗಳ ಕುರಿತು ಒಂದು ವಾರಗಳ ಕಾಲ ವಿಶೇಷ ವಿಧಾನ ಸಭಾ ಅಧಿವೇಶನ ಕರೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಉಪ ಯೋಜನೆ ಸಮರ್ಪಕ ಜಾರಿಗಾಗಿ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಕಾರ್‍ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಸಮಿತಿ ಕಾರ್‍ಯಕರ್ತರು ಕೆಲಕಾಲ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಸಾಮಾನ್ಯ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ 25396 ಕೋಟಿ ಹಣವನ್ನು ಎಸ್.ಸಿ.ಎಸ್.ಪಿ, ಟಿಎಸ್‌ಪಿ ಯೋಜನೆಗೆ ಹಿಂದಿರುಗಿಸಬೇಕು. ದಲಿತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಎದುರಾಗಿರುವ ಸಮಸ್ಯೆ-ಸವಾಲುಗಳ ಕುರಿತು ಒಂದು ವಾರಗಳ ಕಾಲ ವಿಶೇಷ ವಿಧಾನ ಸಭಾ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.ಜಿಲ್ಲಾ-ತಾಲೂಕು, ಗ್ರಾಮ ಪಂಚಾಯ್ತಿಗಳು, ಬೃಹತ್ ಮಹಾನಗರ ಪಾಲಿಕೆಗಳು, ನಗರ ಪಾಲಿಕೆಗಳು, ಪುರಸಭೆಗಳಲ್ಲೂ ಒಂದು ವಾರಗಳ ಕಾಲ ಈ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗಳನ್ನು ಪುನರ್ ರೂಪಿಸಬೇಕು. ಆಯಾ ಜಿಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಆಧರಿಸಿ ಉದ್ಯೋಗ ಸೃಷ್ಠಿಸುವಂತಹ ಯೋಜನೆ ರೂಪಿಸಬೇಕು. ಕಳದೆ 10 ವರ್ಷಗಳ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಮತ್ತು ಅನುಷ್ಠಾದ ಬಗ್ಗೆ ತಜ್ಞರ ಸಮಿತಿ ರಚಿಸಿ ಮೌಲ್ಯಮಾಪನ ಮಾಡಬೇಕು ಎಂದು ಆಗ್ರಹಿಸಿದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ಉಪ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಕಾಯ್ದೆ ನಿಯಮದಂತೆ ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಬೇಕು. ರಾಜ್ಯಾದ್ಯಂತ ಎಸ್‌ಸಿಎಸ್‌ಪಿಗಳ ಮನೆ ಮನೆಗೂ ಜಾಗೃತಿ ಮೂಡಿಸುವಂತಾಗಬೇಕು. ಯೋಜನೆಗಳ ಕುರಿತು ರಾಜ್ಯ ವಿಚಕ್ಷಣಾ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಮುಖಂಡರಾದ ಅಂಬೂಜಿ, ವಿಜೇಂದ್ರಕುಮಾರ್, ಕೆ.ಎಸ್. ಶಿವಲಿಂಗಯ್ಯ, ಮಲ್ಲಿಕಾರ್ಜುನಸ್ವಾಮಿ, ಗಿರಿಜಮ್ಮ, ಗೋವಿಂದರಾಜು, ಕೆ.ಪರಶುರಾಮ, ರಾಜೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.