ಬೆಳೆಹಾನಿ, ಮನೆ ಹಾನಿ ಪರಿಹಾರಕ್ಕಾಗಿ ಧರಣಿ

| Published : Aug 29 2025, 02:00 AM IST

ಸಾರಾಂಶ

ರೈತ ಕುಟುಂಬಗಳು ಅತಿಯಾಗಿ ಸುರಿದ ಮಳೆಯಿಂದ ಸಂಕಷ್ಟ ಎದುರಿಸುತ್ತಿವೆ. ಆದರೆ, ಸ್ಥಳೀಯ ಶಾಸಕರು ಸಚಿವರನ್ನು ಕರೆದುಕೊಂಡು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತುರ್ತಾಗಿ ಮಳೆಹಾನಿ ಪರಿಹಾರ ಘೋಷಣೆ ಮಾಡಬೇಕು.

ಧಾರವಾಡ: ನವಲಗುಂದ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಆಗಿರುವ ಬೆಳೆ ಹಾನಿ ಹಾಗೂ ಹಾನಿಯಾದ ಮನೆಗಳಿಗೆ ಪರಿಹಾರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ರೈತ ಕುಟುಂಬಗಳು ಅತಿಯಾಗಿ ಸುರಿದ ಮಳೆಯಿಂದ ಸಂಕಷ್ಟ ಎದುರಿಸುತ್ತಿವೆ. ಆದರೆ, ಸ್ಥಳೀಯ ಶಾಸಕರು ಸಚಿವರನ್ನು ಕರೆದುಕೊಂಡು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತುರ್ತಾಗಿ ಮಳೆಹಾನಿ ಪರಿಹಾರ ಘೋಷಣೆ ಮಾಡಬೇಕು. ಹಾಗೆಯೇ ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಬೆಳೆವಿಮೆ ತುಂಬಿದ್ದಾರೆ. ಅವರಿಗೆ ಸೂಕ್ತ ಬೆಳೆವಿಮೆ ನೀಡಿಲ್ಲ, ಇಲ್ಲಿ ಹಣಕಾಸಿನ ಅವ್ಯವಹಾರ ನಡೆದಿರುವ ಶಂಕೆ ಇದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸರ್ಕಾರ ರೈತರ ಕೂಗು ಕೇಳಿಸುವುದಿಲ್ಲ, ರೈತರ ಕಷ್ಟ ಅರ್ಥವಾಗುತ್ತಿಲ್ಲ. ಸಚಿವರು, ಶಾಸಕರು ಬಂದು ಪ್ರವಾಸ ಮುಗಿಸಿ ಹೋಗಿದ್ದಾರೆ. ಆದರೆ, ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ. ಆರ್.ಬಿ. ಶಿರಿಯಣ್ಣನವರ, ಪಿ.ಎಚ್. ನೀರಲಕೇರಿ, ಗಂಗಣ್ಣ ಮನಮಿ, ಅಂದಾನಯ್ಯ ಹಿರೇಮಠ, ಷಣ್ಮುಖ ಗುರಿಕಾರ, ಸಾಯಿಬಾಬಾ ಆನೇಗುಂದಿ, ಮಂಜುನಾಥ ಗಣಿ, ಶಂಕರಗೌಡ ಬಾಳನಗೌಡರ, ಮಲ್ಲನಗೌಡ ರಾಟಿಮನಿ, ಗುರಪ್ಪ ಅವರಾದಿ, ಷಣ್ಮುಖ ಇಂಡಿ, ಚಂದ್ರು ಹುಲಮನಿ, ರಾಜಶೇಖರ ಕಂಪ್ಲಿ, ಶರಣಪ್ಪಗೌಡ ದಾನಪ್ಪಗೌಡರ, ಅಡಿವೆಪ್ಪ ಮನಮಿ, ರೋಹಿತ ಮತ್ತಿಹಳ್ಳಿ, ಪ್ರಭು ಗುಳಗಣ್ಣನವರ, ಶಿವಯೋಗಿ ಮಂಟೂರಶೆಟ್ಟರ್‌, ಸೋಮು ಪಟ್ಟಣಶೆಟ್ಟಿ, ಫಕ್ಕೀರಪ್ಪ ಜಕ್ಕಪ್ಪನವರ ಮತ್ತಿತರರು ಇದ್ದರು.

ಬೆಳೆ ವಿಮೆಯಲ್ಲಿ ನಮ್ಮ ಭಾಗದ ರೈತರಿಗೆ ಲಕ್ಷಾಂತರ ಕೋಟಿ ರುಪಾಯಿ ರೈತರಿಗೆ ನಷ್ಟವಾಗಿದೆ ಎಂಬ ಸಂಶಯವಿದೆ. ಇಲ್ಲಿ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಮ್ಯಾಚ್ ಫಿಕ್ಸಿಂಗ್ ಮಾಡಿ ಬೆಳೆವಿಮೆಯನ್ನು ಕೆಲವು ಕಡೆಗಳಲ್ಲಿ ಮಾತ್ರ ನೀಡಲಾಗಿದೆ ಎಂಬ ಅನುಮಾನ ಇದೆ. ಅಧಿಕಾರಿಗಳೇ ಬೆಳೆವಿಮೆಯಲ್ಲಿ ಪಾಲುದಾರರಾಗಿರುವುದು ನನ್ನ 30 ವರ್ಷಗಳ ರಾಜಕೀಯ ಅನುಭವದಲ್ಲಿ ಇದೇ ಮೊದಲು. ರೈತನ ಹೊಟ್ಟೆ ಮೇಲೆ ಹೊಡೆಯುತ್ತಿರುವವರು ಯಾರು ಎಂಬುದು ತನಿಖೆಯಾಗಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.