ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಕಾರ್ಮಿಕ ವಿರೋಧಿಯ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆದು ಎಲ್ಲಾ ಯೋಜನಾ ಕಾರ್ಮಿಕರನ್ನು ಕಾಯಂ ಮಾಡಬೇಕು, ಕಾರ್ಮಿಕರಿಗೆ ಕನಿಷ್ಠ ಕೂಲಿ ೨೬ ಸಾವಿರ ಸೇರಿದಂತೆ ಸಾಮಾಜಿಕ ಭದ್ರತಾ ಮಸೂದೆಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ ಸಿಐಟಿಯು ಮತ್ತು ಅಂಗನವಾಡಿ ನೌಕರರ ಸಂಘದಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ.ಕೃಷ್ಣಪ್ಪ ಮಾತನಾಡಿ, ಕೇಂದ್ರ ಸರ್ಕಾರವು, ಕಾರ್ಪೋರೇಟ್ ಕಂಪನಿಗಳು ಕಾರ್ಮಿಕರನ್ನು ಕಡಿಮೆ ಕೂಲಿ ಕೊಟ್ಟು ಸರಿಯಾದ ಸೌಲಭ್ಯಗಳನ್ನು ನೀಡದೇ ದುಡಿಸಿಕೊಳ್ಳಲು ಅವಕಾಶ ಮಾಡಿಕೊಡುವ ದುರುದ್ದೇಶದಿಂದ ದೇಶದಲ್ಲಿ ಜಾರಿಯಲ್ಲಿರುವ ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ಹಾತೊರೆಯುತ್ತಿದೆ. ಈ ಸಂಹಿತೆಗಳಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಿಲ್ಲ, ಇವು ಕಾರ್ಮಿಕರಿಗೆ ಅತ್ಯಂತ ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿನ ಬೆಲೆ ಏರಿಕೆಗೆ ತಕ್ಕಂತೆ ವೇತನವನ್ನು ನೀಡದೇ ಅತ್ಯಂತ ಕಡಿಮೆ ಕೂಲಿ ನೀಡುತ್ತಿದ್ದರೂ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿವೆ. ಮತ್ತೊಂದೆಡೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಕಾರ್ಮಿಕರು, ಜನ ಸಾಮಾನ್ಯರು, ರೈತರು ಕನಿಷ್ಠ ಜೀವನವನ್ನು ನಡೆಸಲು ಪರದಾಡುವಂತಾಗಿದೆ. ಆದ್ದರಿಂದ ಬೆಲೆ ಏರಿಕೆಯನ್ನು ನಿಯಂತ್ರಿಸಿ, ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್.ಕಲ್ಪನಾ, ಸಿಐಟಿಯು ತಾಲೂಕು ಸಂಚಾಲಕ ಎಂ.ಭೀಮರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಎಕ್ಸಿಡಿ ಕ್ಲಚ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಹರೀಶ್, ಅಂಗನವಾಡಿ ನೌಕರರ ಸಂಘದ ಮುಖಂಡರಾದ ವಿ.ಮಂಜುಳ, ಶಿಳ್ಳಂಗೆರೆ ರಾಜಮ್ಮ, ಜಯಲಕ್ಷ್ಮೀ ನಾಗರತ್ನ, ಶಾಂತಮ್ಮ, ಸುಗಟೂರು ರತ್ನಮ್ಮ, ರುಕ್ಮಣಿ, ಶಾಹೀನ್ ತಾಜ್ ಇದ್ದರು.