ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ ಮನೆ ನಿರ್ಮಿಸಿಕೊಂಡಿರುವ ಅನುಭವದಾರರಿಗೆ ಪರಿಹಾರದ ಹಣ ನೀಡಿ, ಆದೇಶ ಗಾಳಿಗೆ ತೂರಿ ಕರ್ತವ್ಯ ಲೋಪ ಎಸಗಿರುವ ಬೇಲೂರು ಎ.ಇ.ಇ. ಎಂಜಿನಿಯರ್ ಅವರನ್ನ ಸೇವೆಯಿಂದ ವಜಾಗೊಳಿಸಲು ಆಗ್ರಹಿಸಿ ತಿರುಮಲನಹಳ್ಳಿ ಗ್ರಾಮಸ್ಥರು ಶನಿವಾರ ಡೀಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ (ಕಂದಾಯ ಇಲಾಖೆ) ಶ್ರೀನಿವಾಸ್‌ರವರು ಮನೆ ನಿರ್ಮಿಸಿಕೊಂಡಿರುವ ಅನುಭವದಾರರಿಗೆ ಪರಿಹರದ ಹಣವನ್ನು ಆರ್.ಟಿ.ಜಿ.ಎಸ್ ಮಾಡಿ ತಕ್ಷಣ ಅವರ ಮನೆ ಮಾಲೀಕರ ಖಾತೆಗೆ ಹಣ ಹಾಕಬೇಕೆಂದು ಲಿಖಿತ ರೂಪದಲ್ಲಿ ಆದೇಶ ಮಾಡಿದ್ದರೂ ಸಹ ಆದೇಶವನ್ನು ಗಾಳಿಗೆ ತೂರಿ ಕರ್ತವ್ಯಲೋಪ ಎಸಗಿರುವ ಜಾತಿವಾದಿ ಬೇಲೂರು ಎ.ಇ.ಇ (ಎತ್ತಿನಹೊಳೆ ಎಂಜಿನಿಯರ್ ) ಪ್ರಕಾಶ್ ಮತ್ತು ಎಂಜಿನಿಯರ್ ಈರಯ್ಯರವರನ್ನು ಕೂಡಲೆ ಸೇವೆಯಿಂದ ವಜಾಗೊಳಿಸಬೇಕೆಂದರು.
ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿ ಅಡಗೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ತಿರುಮನಹಳ್ಳಿಯಲ್ಲಿ ಸರ್ವೆ ನಂಬರ್ ೩೫ ರಲ್ಲಿ ಶಿವಯ್ಯ ಬಿನ್ ರಾಮಯ್ಯ ಚನ್ನ ಬಸವಯ್ಯ ಬಿನ್ ರಾಮಯ್ಯ, ಮೋಹನ್ ದಾಸ್ ಬಿನ್ ರಾಮಯ್ಯ, ಚನ್ನಪ್ಪ ಬಿನ್ ರಾಮಯ್ಯ ಮನೆ ನಿರ್ಮಿಸಿಕೊಂಡು ಸುಮಾರು ವರ್ಷಗಳಿಂದ ಜೀವನ ನಡೆಸುತ್ತಿರುತ್ತಾರೆ. ಈ ಮಧ್ಯೆ ಸರ್ಕಾರ ಎತ್ತಿನಹೊಳೆ ಕುಡಿವ ನೀರಿನ ಯೋಜನೆಗೆ ೫.೨೪ ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿರುತ್ತಾರೆ. ಆದರೆ ಈ ಭೂಮಿ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಪರಿಹಾರದ ಮೊತ್ತವನ್ನು ಕೋರ್ಟಿನಲ್ಲಿ ಜಮಾ ಇಡಲಾಗಿರುತ್ತದೆ ಎಂದರು. ಆದರೆ ವಾಸದ ಮನೆಗೆ ಸಂಬಂಧಪಟ್ಟಂತೆ ಸರ್ಕಾರ ಪುರ್ನವಸತಿ ಕಲ್ಪಿಸಿದ ನಂತರ ಕಾಮಗಾರಿ ಮಾಡುವಂತೆ ಮತ್ತು ಮನೆಯ ಪರಿಹಾರದ ಹಣವನ್ನು ಮೂರು ದಿನಗಳ ಒಳಗೆ ಅನುಭವದಾರರಿಗೆ ಮಾಡಬೇಕೆಂದು ನಿಯಮವಿದ್ದರೂ ಸಹ ಬೇಲೂರಿನ ಎ. ಡಬ್ಲ್ಯೂ,ಇ, ಪ್ರಕಾಶ್ ಮತ್ತು ಎಂಜಿನಿಯರ್ ಈರಯ್ಯ ಪದೇ ಪದೆ ಮನೆ ಹತ್ತಿರ ಬಂದು ಧಮ್ಕಿ ಹಾಕುವುದು ಮತ್ತು ಹೆದರಿಸುವುದು ಮಾಡುತ್ತಿರುತ್ತಾರೆ ಎಂದು ಆರೋಪಿಸಿದರು.ಇತ್ತೀಚೆಗೆ ಒಂದು ಸಾಕು ನಾಯಿಯನ್ನು ಸಹ ಇವರ ಕೆಲಸಗಾರರು ವಾಹನದಿಂದ ಡಿಕ್ಕಿ ಹೊಡೆಸಿ ಸಾಯಿಸಿರುತ್ತಾರೆ. ಹೀಗಿರುವಾಗ ವಾಸದ ಮನೆಯ ಪಕ್ಕದಲ್ಲಿ ಡೈನಾಮೆಟ್ ಸ್ಫೋಟಕವನ್ನು ಸಿಡಿಸುತ್ತಾರೆ. ಇದರಿಂದ ಚಿಕ್ಕ ಮಕ್ಕಳು ವೃದ್ಧರು ಓಡಾಡಲು ತುಂಬಾ ಭಯಪಡುತ್ತಿರುತ್ತಾರೆ ಮತ್ತು ವಾರದಲ್ಲಿ ೪ ರಿಂದ ೩ ಬಾರಿ ಸಿಡಿಮದ್ದಿನಿಂದ ಸ್ಫೋಟಿಸುತ್ತಾರೆ. ಇದರಿಂದ ಯಾವ ಸಂದರ್ಭದಲ್ಲಾದರೂ ಅನಾಹುತ ಆಗುವ ಸಂಭವಿರುತ್ತದೆ. ಆದ್ದರಿಂದ ವಾಸದ ಮನೆಗಳಿಗೆ ಹಣವನ್ನು ಹಾಕಿ (ಪುರ್ನವಸತಿ ಕಲ್ಪಿಸಿ )ನಂತರ ಕೆಲಸ ಮಾಡಬೇಕು ಮತ್ತು ಉದ್ದೇಶ ಪೂರ್ವಕವಾಗಿ ಪರಿಶಿಷ್ಟ ಜಾತಿಯ ಭೂಮಿಯನ್ನು ಯೋಜನೆಗೆ ಬಳಸಿಕೊಂಡಿರುತ್ತಾರೆ. ಕಾಮಗಾರಿ ಮಾಡಲು ನಾವು ಅಡ್ಡಿಪಡಿಸುವುದಿಲ್ಲ. ಕೂಡಲೇ ಅನುಭವದಲ್ಲಿರುವ ಮನೆ ಮಾಲೀಕರಿಗೆ ತಕ್ಷಣ ಪರಿಹಾರ ಹಣವನ್ನು ಖಾತೆಗೆ ಹಾಕಿ ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳನ್ನ ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಿರುಮನಹಳ್ಳಿ ಗ್ರಾಮದ ಶಿವಕುಮಾರ್, ರವೀಂದ್ರ, ನಂದಿನಿ, ಚೈತ್ರ, ಹರೀಶ್, ಅಂಬರೀಶ್, ಹೇಮಲತಾ, ನಿತಿನ್, ಕುಮಾರ್ ತ್ಯಾಗಿ, ಕಮಲಮ್ಮ, ಇತರರು ಉಪಸ್ಥಿತರಿದ್ದರು.