ಸಾರಾಂಶ
ರಾಯಚೂರು ನಗರದ ಡಿಸಿ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮುಖಾಂತರ ಸಿಎಂಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು/ಸಿಂಧನೂರು
ಕನ್ನಡಗರಿಗೆ ಶೇ.100ರಷ್ಟು ಉದ್ಯೋಗ ನೀಡುವ ಆದೇಶ ಹಿಂಪಡೆದ ಧೋರಣೆ ಖಂಡಿಸಿ ಹಾಗೂ ತಡೆಹಿಡಿದ ಮಸೂದೆಗೆ ಶೀಘ್ರ ರಾಜ್ಯ ಸರ್ಕಾರ ಕಾಯ್ದೆ ರೂಪ ನೀಡಿ ಮರು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ರಾಯಚೂರು ಜಿಲ್ಲಾ ಮತ್ತು ಸಿಂಧನೂರು ತಾಲೂಕು ಘಟಕಗಳಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಜಿಲ್ಲಾ ಸಮಿತಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು. ಅದೇ ರೀತಿ ಸಿಂಧನೂರು ನಗರದ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿ, ಶಿರಸ್ತೇದಾರ್ ಅಂಬಾದಾಸ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
ಕನ್ನಡಿಗರ ಉದ್ಯೋಗಗಳ ವಿಷಯದಂಗವಾಗಿ ಸರ್ಕಾರವು ಸಿ ಮತ್ತು ಡಿ ಹುದ್ದೆಗಳಿಗೆ ಶೇ.100ರಷ್ಟು ಆದೇಶ ಹೊರಡಿಸಿತು. ಇದನ್ನು ವಿಧಾನಸಭೆಯಲ್ಲಿ ಅನುಮೋದಿಸಲಾಯಿತು. ಜಾರಿಗೆ ತರುವ ನಿಟ್ಟಿನಲ್ಲಿ ಆದೇಶ ಮಾಡಲಾಗಿತ್ತು, ಆದರೆ ರಾಜ್ಯದಲ್ಲಿರುವ ಉದ್ಯಮಿಗಳ ಒತ್ತಡಕ್ಕೆ ಮಣಿದು ಮಸೂದೆಯನ್ನು ಸರ್ಕಾರ ತಡೆಹಿಡಿದಿರುವುದು ಖಂಡನೀಯ. ಉದ್ದಿಮೆದಾರರು ಕರ್ನಾಟಕ ರಾಜ್ಯದ ಎಲ್ಲ ಸವಲತ್ತು ಪಡೆದು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ನಗರ ಘಟಕ ಅಧ್ಯಕ್ಷ ದೌಲಸಾಬ್ ದೊಡ್ಡಮನಿ ದೂರಿದರು.ಕೂಡಲೇ ರಾಜ್ಯ ಸರ್ಕಾರ ತಡೆಹಿಡಿದ ಮಸೂದೆ ಶೀಘ್ರವಾಗಿ ಮರು ಜಾರಿ ಮಾಡಬೇಕು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಲು ಆದ್ಯತೆ ನೀಡಬೇಕು. ಒಂದು ವೇಳೆ ಉದ್ದಿಮೆದಾರರ ಪರವಾಗಿ ಸರ್ಕಾರ ನಿಂತರೆ ರಾಜ್ಯದಾದ್ಯಂತ ಸಂಘಟನೆಯಿಂದ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರಾಯಚೂರಿನ ಹೋರಾಟದಲ್ಲಿ ಕರವೇ ಕಾರ್ಯಕರ್ತರಾದ ಮಲ್ಲಿಕಾರ್ಜುನ, ಜೆ.ನಾರಾಯಣ ಹಟ್ಟಿ, ಕೆ.ವಿ.ಕಳ್ಳಿಮಠ,ಆಸೀಫ್,ಅಜೀಜ್,ಸಂಜಯ ವೈಷ್ಣವ್, ವೀರೇಶ, ನಾಗರಾಜ ಮಡಿವಾಳ, ರಮೇಶ ಹಟ್ಟಿ ಸೇರಿ ಅನೇಕರಿದ್ದರು.ತಾಲೂಕು ಘಟಕದ ಅಧ್ಯಕ್ಷ ಜಿ.ಸುರೇಶ ಗೊಬ್ಬರಕಲ್, ಪ್ರಧಾನ ಕಾರ್ಯದರ್ಶಿ ಹನುಮೇಶ ತಿಪ್ಪನಹಟ್ಟಿ, ಉಪಾಧ್ಯಕ್ಷ ಪರಶುರಾಮ್ ಗೀತಾಕ್ಯಾಂಪ್, ಸದಸ್ಯರಾದ ಆಂಜಿನಯ್ಯ, ರವಿಕುಮಾರ ಹೊಸಮನಿ, ಮೈಬುಸಾಬ್, ವಿಶ್ವ, ಶಿವುಕುಮಾರ ಎಚ್, ಪ್ರದೀಪ್ ಪೂಜಾರಿ ಇದ್ದರು.