ದೇಶಾದ್ಯಂತ 5 ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೊಳಿಸಬೇಕು, ದೋಷಪೂರಿತ ಪ್ರೋತ್ಸಾಹಧನ ನೀಡುವ ಯೋಜನೆ ತಡೆಯುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ(ಯುಎಫ್‌ಬಿಯು) ಜಿಲ್ಲಾ ಘಟಕದ ನೇತೃತ್ವದಲ್ಲಿ ಬ್ಯಾಂಕ್‌ ಅಧಿಕಾರಿ, ನೌಕರರು ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನಗರದಲ್ಲಿ ಮುಷ್ಕರ ನಡೆಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶಾದ್ಯಂತ 5 ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೊಳಿಸಬೇಕು, ದೋಷಪೂರಿತ ಪ್ರೋತ್ಸಾಹಧನ ನೀಡುವ ಯೋಜನೆ ತಡೆಯುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ(ಯುಎಫ್‌ಬಿಯು) ಜಿಲ್ಲಾ ಘಟಕದ ನೇತೃತ್ವದಲ್ಲಿ ಬ್ಯಾಂಕ್‌ ಅಧಿಕಾರಿ, ನೌಕರರು ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನಗರದಲ್ಲಿ ಮುಷ್ಕರ ನಡೆಸಿದರು.

ನಗರದ ಮಂಡಿಪೇಟೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆವರಣದಲ್ಲಿ ಯುಎಫ್‌ಬಿಯು ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗುವ ಮೂಲಕ ಬ್ಯಾಂಕ್ ಅಧಿಕಾರಿ, ನೌಕರರು ಪ್ರತಿಭಟನಾ ಮತ ಪ್ರದರ್ಶನದಲ್ಲಿ ಭಾಗಿಯಾದರು.

ಇದೇ ವೇಳೆ ಮಾತನಾಡಿದ ಯುಎಫ್‌ಬಿಯು ಜಿಲ್ಲಾ ಸಂಚಾಲಕ, ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ ರಾಷ್ಟ್ರೀಯ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಬ್ಯಾಂಕ್‌ ಉದ್ಯೋಗಿಗಳ ದೀರ್ಘ ಕಾಲದ ಬೇಡಿಕೆಯಾದ ಐದು ದಿನದ ಬ್ಯಾಂಕಿಂಗ್ ‌ಪದ್ಧತಿ ಜಾರಿಗೊಳ್ಳಬೇಕು. ಸರ್ಕಾರ ಏಕಪಕ್ಷೀಯವಾಗಿ ಜಾರಿಗೆ ತಂದ ತಾರತಮ್ಯ ಪೂರಿತ ಪ್ರೋತ್ಸಾಹ ಧನ ಯೋಜನೆ ಹಿಂಪಡೆಯಬೇಕು. ಬಾಕಿ ಉಳಿದ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಐದು ದಿನಗಳ ಬ್ಯಾಂಕಿಂಗ್ ಪದ್ಧತಿ ಬೇಡಿಕೆ ಬಗ್ಗೆ ಕಳೆದೊಂದು ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ. ಈಗಾಗಲೇ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್, ಬ್ಯಾಂಕ್ ಕಾರ್ಮಿಕ ಸಂಘಗಳ‌ ನಡುವೆ 8.03.2024ರಂದೇ ಒಪ್ಪಂದವಾಗಿದೆ. ಆದರೆ, ಎರಡೂವರೆ ವರ್ಷ ಕಳೆದರೂ ಬೇಡಿಕೆ ಈಡೇರಿಸಿಲ್ಲ. ಬ್ಯಾಂಕ್ ಉದ್ಯೋಗಿಗಳ ಸಹನೆ ಕಟ್ಟೆಯೊಡೆದು ಮುಷ್ಕರದ ಹಾದಿ ಅನಿವಾರ್ಯವಾಗಿದೆ. ಪ್ರಸ್ತುತ ಬ್ಯಾಂಕ್ ಉದ್ಯೋಗಿಗಳು ಅತೀ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ವ್ಯವಹಾರಕ್ಕೆ ತಕ್ಕನಾಗಿ ಉದ್ಯೋಗಿಗಳ ನೇಮಕಾತಿಯೂ ಆಗುತ್ತಿಲ್ಲ ಎಂದು ದೂರಿದರು.

ವಾರದ ದಿನಗಳಲ್ಲಿ ನೌಕರರು ರಾತ್ರಿ 10 ಗಂಟೆಯಾದರೂ ಮನೆಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ 5 ದಿನದ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬಂದರೆ ನೌಕರರ ಕಾರ್ಯಕ್ಷಮತೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಅಲ್ಲದೇ ಕೇಂದ್ರದ ಅಧೀನದಲ್ಲಿರುವ ಹಲವಾರು ಇಲಾಖೆಗಳು, ಜೀವ ವಿಮೆ, ಸಾಮಾನ್ಯ ವಿಮೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಬಿ, ನಬಾರ್ಡ್ ಮೊದಲಾದ ಇಲಾಖೆಗಳು ವಾರಕ್ಕೆ 5 ದಿನ ಮಾತ್ರ ಕೆಲಸ ಮಾಡುತ್ತಿವೆ‌. ಜಾಗತಿಕ ಮಟ್ಟದಲ್ಲೂ ಅಮೇರಿಕಾ, ಇಂಗ್ಲೆಂಡ್, ಕೆನಡಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ರಷ್ಯಾ, ಬ್ರೆಜಿಲ್, ಸೌತ್ ಆಫ್ರಿಕಾ, ಮಲೇಷ್ಯಾ, ಇಂಡೋನೇಷ್ಯಾ ಮತ್ತಿತರ ಅನೇಕ ರಾಷ್ಟ್ರಗಳಲ್ಲಿ 5 ದಿನದ ಬ್ಯಾಂಕಿಂಗ್ ಪದ್ಧತಿ ಜಾರಿಯಲ್ಲಿದೆ ಎಂದರು.

ಕೇಂದ್ರ ಹಣಕಾಸು ಇಲಾಖೆ ಅನಗತ್ಯ ಕಾಲಹರಣ ಮಾಡಿ ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತ ಬೇಡಿಕೆ ಈಡೇರಿಸುವಲ್ಲಿ ಸೋತಿದೆ. ಈ ಮುಷ್ಕರದಲ್ಲಿ ಸುಮಾರು 8 ಲಕ್ಷ ಬ್ಯಾಂಕ್ ನೌಕರರು, ಅಧಿಕಾರಿಗಳು ಪಾಲ್ಗೊಂಡು, ಬೀದಿಗಿಳಿದು ಸರಕಾರದ ವಿಳಂಬ ಧೋರಣೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ನಮ್ಮ ಹೋರಾಟಕ್ಕೆ ನ್ಯಾಯ ಒದಗಿಸದೇ ಹೋದಲ್ಲಿ ಸೆಪ್ಟೆಂಬರ್ ಕೊನೆಯ ವಾರ ಮತ್ತೆ 3 ದಿನ ಮತ್ತು ಅಕ್ಟೋಬರ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದರು.

ಮುಖಂಡ ಸುನಿಲ್ ಮ್ಯಾಗೇರಿ ಮಾತನಾಡಿ, ಸೆ.12ರಿಂದ 3 ದಿನ ಬ್ಯಾಂಕ್ ರಜೆ ಇದ್ದು, ಇಂದಿನ ಬ್ಯಾಂಕ್ ಮುಷ್ಕರದಿಂದ ಜನರಿಗೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಸಮಸ್ಯೆಗೆ ಕೇಂದ್ರ, ಕೇಂದ್ರ ಹಣಕಾಸು ಸಚಿವಾಲಯ, ಕೇಂದ್ರ ಹಣಕಾಸು ಸೇವೆಗಳ ಇಲಾಖೆ ನೇರ ಹೊಣೆ ಹೊರಬೇಕು. ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶೇ.95ರಷ್ಟು ಉದ್ಯೋಗಿಗಳ ಹಿತ ಕಡೆಗಣಿಸಿ, ಶೇ.5ರಷ್ಟಿರುವ ಉನ್ನತ ಅಧಿಕಾರಿಗಳಿಗೆ ಹೆಚ್ಚು ಪ್ರೋತ್ಸಾಹಧನ ನೀಡುವ ಯೋಜನೆ ಬಹುಸಂಖ್ಯಾತ ಉದ್ಯೋಗಿಗಳಿಗೆ ಶಾಪವವಾಗಿದೆ. ಇದನ್ನು ಹಿಂಪಡೆದು, ಯುಎಫ್‌ಬಿಯು ಜೊತೆ ಚರ್ಚಿಸಿ, ಸುಧಾರಿತ ಯೋಜನೆ ಜಾರಿಗೊಳಿಸಲಿ ಎಂದು ಒತ್ತಾಯಿಸಿದರು.

ಸಂಘಟನೆ ಮುಖಂಡರಾದ ಪ್ರದೀಪ ಪಾಟೀಲ, ಕೆ.ವಿಶ್ವನಾಥ ಬಿಲ್ಲವ, ಮಹೇಶ ಟಿ.ದೊಡ್ಡಮನಿ, ಎಂ.ಪಿ.ಕಿರಣಕುಮಾರ, ಕೆ.ವಿಜಯಕುಮಾರ, ಎಂ.ಶಮಂತ್, ಸಾಗರ್ ಜೋಶಿ, ನಾಗರಾಜ ನಾಶಿ, ಆರ್.ಆಂಜನೇಯ, ಎಚ್.ಎಸ್.ತಿಪ್ಪೇಸ್ವಾಮಿ, ಶಿವರಾಮ ಕೃಷ್ಣನ್, ಜಿ.ಎಸ್.ಸಂಧ್ಯಾ, ಎಂ.ಎಚ್‌.ಗಿರೀಶ, ಸಿದ್ಧಾರ್ಥ ಸಿಂಗ್, ಶೋಭಾ ದಿವಾಕರ, ಸಿ.ದುರ್ಗಪ್ಪ, ವಿಶ್ವಚೇತನ್, ಅನುರಾಧಾ ಮುತಾಲಿಕ್, ದೀಪಾ ಗುಡಿ, ಅನಿಲಕುಮಾರ, ಜಿ.ಟಿ.ಬಸವರಾಜ, ಎಸ್.ರಶ್ಮಿ, ಮಧುಸ್ವಿನಿ ದೇಸಾಯಿ, ಅನಿಲಕುಮಾರ, ಮಹಮದ್ ರಫಿ, ಎಂ‌.ಎಂ.ಸಿದ್ದಲಿಂಗಯ್ಯ, ಪರಶುರಾಮ, ಶಂಭು ಹಿರೇಮಠ, ಎಂ.ಡಿ.ವಿದ್ಯಾಸಾಗರ, ಅಣ್ಣಪ್ಪ ನಂದಾ, ಮಾಕನೂರು ತಿಪ್ಪೇಸ್ವಾಮಿ, ಸೈಯದ್ ಚಾಂದಬಾಷಾ, ಎಚ್.ಜೆ.ಆಶಾ, ಶೃತಿ ಪತ್ತಾರ್, ಸುಮನಾ, ಅನ್ನಪೂರ್ಣ, ಎಚ್.ಶೈಲ ಜಾ, ಮಂಜಮ್ಮ, ಶ್ರೀಧರ ಪೆರೂರು, ಜ್ಞಾನೇಶ್ವರ ಮಾಲವಾಡೆ, ಉಷಾ, ಎನ್.ಜಿ.ನಾಗರತ್ನಮ್ಮ ಇತರರಿದ್ದರು.