ಬಿಜೆಪಿಯಿಂದಲೂ ಪ್ರತಿಭಟನೆ: ಕೆಳಗೆ ಬಿದ್ದ ರೇಣು!

| Published : Jul 29 2025, 01:00 AM IST

ಬಿಜೆಪಿಯಿಂದಲೂ ಪ್ರತಿಭಟನೆ: ಕೆಳಗೆ ಬಿದ್ದ ರೇಣು!
Share this Article
  • FB
  • TW
  • Linkdin
  • Email

ಸಾರಾಂಶ

ಸಮರ್ಪಕವಾಗಿ ಯೂರಿಯಾ ಪೂರೈಸದ ರಾಜ್ಯ ಸರ್ಕಾರದ ವಿರುದ್ಧ ಹಳೇ ಟೈರ್‌ ಸುಟ್ಟು, ಪ್ರತಿಭಟಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಗರದಲ್ಲಿ ಸೋಮವಾರ ನಡೆಯಿತು.

- ದಾವಣಗೆರೆಯಲ್ಲಿ ಪ್ರತಿಭಟನೆ ವೇಳೆ ಪೊಲೀಸ್-ಬಿಜೆಪಿ ಹೈಡ್ರಾಮಾ

- ಬೆಂಕಿ ಹಚ್ಚಿದ್ದ ಟೈರ್‌ ಪುಟ್ಬಾಲ್‌ನಂತೆ ಆಟವಾಡಿದ ಬಿಜೆಪಿ-ಪೊಲೀಸರು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಮರ್ಪಕವಾಗಿ ಯೂರಿಯಾ ಪೂರೈಸದ ರಾಜ್ಯ ಸರ್ಕಾರದ ವಿರುದ್ಧ ಹಳೇ ಟೈರ್‌ ಸುಟ್ಟು, ಪ್ರತಿಭಟಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಗರದಲ್ಲಿ ಸೋಮವಾರ ನಡೆಯಿತು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಉಪವಿಭಾಗಾಧಿಕಾರಿ ಕಚೇರಿಗೆ ಹೋಗುವ ಮಾರ್ಗದಲ್ಲಿ ಹಳೇ ಪಿ.ಬಿ. ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಂಚಿದಾಗ ಮಫ್ತಿಯಲ್ಲಿದ್ದ ಪೊಲೀಸ್ ಒಂದು ಕೊಡಪಾನ ನೀರು ತಂದು ಬೆಂಕಿ ನಂದಿಸಲು ಮುಂದಾದರು. ಆಗ ಕಾರ್ಯಕರ್ತರು ತಳ್ಳಿಕೊಂಡು ಹೋದರು. ನಂತರ ಸಮವಸ್ತ್ರದಲ್ಲಿದ್ದ ಸಿಬ್ಬಂದಿ ಟೈರ್ ದಬ್ಬಿದಾಗ ಪ್ರತಿಭಟನಾಕಾರರು, ಪೊಲೀಸರು ಫುಟ್‌ಬಾಲ್ ಆಡುವಂತೆ ಟೈರ್ ನೂಕಾಡತೊಡಗಿದರು.

ಬೆಂಕಿ ನಂದಿಸಿದ್ದ, ಸುಡುತ್ತಿದ್ದ ಟೈರ್‌ ಎಳೆದುಕೊಳ್ಳಲು ಮುಂದಾದ ಎಂ.ಪಿ. ರೇಣುಕಾಚಾರ್ಯ ನಿಯಂತ್ರಣ ಮುಗ್ಗರಿಸಿ ಬಿದ್ದರು. ತಕ್ಷಣ‍ವೇ ಕಾರ್ಯಕರ್ತರು, ಮುಖಂಡರು ಮಾಜಿ ಸಚಿವರ ರಕ್ಷಣೆಗೆ ಬಂದರು. ಅನಂತರ ಪರಿಸ್ಥಿತಿ ವಿಕೋಪಕ್ಕ ಹೋಗುವುದನ್ನು ತಡೆಯಲು ಪೊಲೀಸರು ಮುನ್ನೆಚ್ಚರಿಕೆಯಾಗಿ ಪ್ರತಿಭಟನೆ ನೇತೃತ್ವ ವಹಿಸಿದ್ದ ರೇಣುಕಾಚಾರ್ಯ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ತಮ್ಮ ವಾಹನದಲ್ಲಿ ಕೂರಿಸಿ, ಕವಾಯಿತು ಮೈದಾನಕ್ಕೆ ಕರೆದೊಯ್ದರು.

ಪ್ರತಿಭಟನೆ ವೇಳೆ ಮುಖಂಡರು ಮಾತನಾಡಿ, ಮುಂಗಾರು ಉತ್ತಮವಾಗಿದ್ದು, ಮೆಕ್ಕೆಜೋಳ, ಬತ್ತಿ, ಬತ್ತ ಸೇರಿದಂತೆ ಎಲ್ಲ ಬೆಳೆಗಳಿಗೆ ತುರ್ತಾಗಿ ಯೂರಿಯಾದ ಅಗತ್ಯವಿದೆ. ಆದರೆ, ಭದ್ರಾ ಡ್ಯಾಂ, ಭದ್ರಾ ನೀರಿನ ವಿಚಾರವಾಗಿ ರೈತರೊಂದಿಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರ ಇದೀಗ ಮಳೆಯಾಶ್ರಿತ, ನೀರಾವರಿ ರೈತರ ಬದುಕಿನೊಂದಿಗೂ ಆಟ ಶುರು ಮಾಡಿದೆ. ವಿಷ ಕೊಡಿ ಇಲ್ಲವೇ, ಯೂರಿಯಾ ಕೊಡಿ ಎಂಬ ಘೋಷಣೆಯೊಂದಿಗೆ ನಾವು ಹೋರಾಟ ನಡೆಸಬೇಕಾಗಿದೆ. ಸರ್ಕಾರ ಕೂಡಲೇ ರೈತಪರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಆಲೂರು ನಿಂಗರಾಜ, ಧನಂಜಯ ಕಡ್ಲೆಬಾಳ್, ಅನಿಲಕುಮಾರನಾಯ್ಕ, ಐರಣಿ ಅಣ್ಣೇಶ, ತಾರೇಶ ನಾಯ್ಕ, ಅರಕೆರೆ ನಾಗರಾಜ, ಬಲ್ಲೂರು ಬಸವರಾಜು ಮತ್ತಿತರರು ಪ್ರತಿಭಟನೆಯಲ್ಲಿದ್ದರು.

- - -

(ಫೋಟೋಗಳಿವೆ.)