ಸಾರಾಂಶ
ಬದನಗೋಡ ಗ್ರಾಪಂ ವ್ಯಾಪ್ತಿಯಲ್ಲಿ ಪದೇಪದೇ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ರೈತರು ಬೇಸತ್ತಿದ್ದಾರೆ.
ಶಿರಸಿ: ತಾಲೂಕಿನ ಬದನಗೋಡ ಗ್ರಾಪಂ ವ್ಯಾಪ್ತಿಯಲ್ಲಿ ಪದೇಪದೇ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ರೈತರು ಬೇಸತ್ತಿದ್ದಾರೆ. ವಾರದೊಳಗೆ ಸಮಸ್ಯೆ ಬಗೆಹರಿಸಿ, ಸಮರ್ಪಕ ವಿದ್ಯುತ್ ಪೂರೈಕೆ ಮಾಡದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಪಂ ಸದಸ್ಯ ಮಾರುತಿ ಮಟ್ಟೇರ್ ಕುಪ್ಪಗಡ್ಡೆ ಎಚ್ಚರಿಕೆ ನೀಡಿದ್ದಾರೆ.
ಪ್ರತಿದಿನ ೨೦ ರಿಂದ ೩೦ ಬಾರಿ ವಿದ್ಯುತ್ ವ್ಯತ್ಯಯ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಹಾಗೂ ರೈತರಿಗೆ ತುಂಬ ಕಿರಿಕಿರಿ ಆಗಿ ಬೇಸತ್ತು ಹೋಗಿದ್ದಾರೆ. ದಾಸನಕೊಪ್ಪದಲ್ಲಿ ಕೋಟ್ಯಂತರ ರು. ವ್ಯಯಿಸಿ ವಿದ್ಯುತ್ ಗ್ರಿಡ್ ನಿರ್ಮಿಸಲಾಗಿದೆ. ಆ ಗ್ರಿಡ್‌ಗೆ ಹಾನಗಲ್‌ನಿಂದ ವಿದ್ಯುತ್ ಪೂರೈಕೆ ಮಾಡಿದ್ದಾರೆ. ಶಿರಸಿ ಮುಖ್ಯ ಗ್ರಿಡ್‌ನಿಂದ ವಿದ್ಯುತ್ ಪೂರೈಕೆ ಮಾಡುವ ಬದಲಾಗಿ ಹಾನಗಲ್‌ನಿಂದ ವಿದ್ಯುತ್ ಪೂರೈಕೆ ಮಾಡಿರುವುದಕ್ಕೆ ಪದೇಪದೇ ವಿದ್ಯುತ್ ತೆಗೆಯುತ್ತಿದ್ದಾರೆ ಎಂದರು.ವಿದ್ಯುತ್ ವ್ಯತ್ಯಯದಿಂದ ನೀರಿಲ್ಲದೇ ಅಡಿಕೆ ತೋಟಗಳು ಒಣಗಿ ಹೋಗಿವೆ. ಕೆಲವು ರೈತರ ಪಂಪ್ ಸೆಟ್‌ಗಳು ಸುಟ್ಟು ಹೋಗಿವೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಹೇಳಿದರೆ ಗಮನ ಹರಿಸುತ್ತಿಲ್ಲ. ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥ ಮಾಡದಿದ್ದರೆ ದಾಸನಕೊಪ್ಪ ಸುತ್ತಮುತ್ತಲಿನ ರೈತರೆಲ್ಲರೂ ಒಟ್ಟಾಗಿ ರಸ್ತೆ ತಡೆ ನಡೆಸಿ, ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.