ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ: ರಾಜ್ಯಾಧ್ಯಕ್ಷ ನಾಗೇಂದ್ರ

| Published : Feb 26 2024, 01:36 AM IST

ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ: ರಾಜ್ಯಾಧ್ಯಕ್ಷ ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳದಿದ್ದರೆ ಸೋಮವಾರ ಕೊಳ್ಳೇಗಾಲ ಡಿಸಿಎಫ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಪ್ರತಿಭಟನೆಯಲ್ಲಿ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಇನ್ನಿತರ ಜಿಲ್ಲೆಗಳಿಂದಲೂ ರೈತರು ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ರೈತರು ಹಾಗೂ ರೈತ ಮಹಿಳೆಯರ ಮೇಲೆ ಹಲ್ಲೆ ನಡೆಸಿದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಕೊಳ್ಳೇಗಾಲ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ರೈತರ ಮೇಲೆ ಹಲ್ಲೆಗೈದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಮೂರು ದಿನಗಳಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಸ್ಧಳಕ್ಕೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಭೇಟಿ ನೀಡಿ ರೈತರ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸಿ, ನಂತರ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳದಿದ್ದರೆ ಸೋಮವಾರ ಕೊಳ್ಳೇಗಾಲ ಡಿಸಿಎಫ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಪ್ರತಿಭಟನೆಯಲ್ಲಿ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಇನ್ನಿತರ ಜಿಲ್ಲೆಗಳಿಂದಲೂ ರೈತರು ಭಾಗವಹಿಸಲಿದ್ದಾರೆ. ಕಾಡು ಪ್ರಾಣಿಗಳಿಂದ ತತ್ತರಿಸಿರುವ ರೈತರು, ಹೂಗ್ಯಂ ಗಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡುಪ್ರಾಣಿಗಳನ್ನು ನಿಯಂತ್ರಿಸುವಂತೆ ಮಾಹಿತಿ ನೀಡಿದರೆ ರಾತ್ರೋರಾತ್ರಿ ಬಂದು ಅಧಿಕಾರಿ ಹಾಗೂ ಸಿಬ್ಬಂದಿ ಏನೂ ತಿಳಿಯದ ಬಡ ರೈತ ಮತ್ತು ಅವರ ಕುಟುಂಬ ಮಹಿಳೆಯರು ಸೇರಿ ಎಲ್ಲರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸೆಗಿರುವ ಘಟನೆ ತಲೆತಗ್ಗಿಸುವಂತಿದೆ. ಹಿರಿಯ ಅಧಿಕಾರಿಗಳೂ ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳದೆ ಹಲ್ಲೆಗೊಳಗಾಗಿರುವ ರೈತನ ಕುಟುಂಬದವರ ಮೇಲೆ ದೂರು ಸಲ್ಲಿಸುವುದಾಗಿ ಬೆದರಿಕೆ ಹಾಕಿರುವುದನ್ನು ರಾಜ್ಯ ರೈತ ಸಂಘ ಸಹಿಸುವುದಿಲ್ಲ.ಈ ಘಟನೆಯ ಬಗ್ಗೆ ಜವಾಬ್ದಾರಿ ಅರಿತು ಹಿರಿಯ ಅಧಿಕಾರಿಗಳು ತಳಮಟ್ಟದ ಅಧಿಕಾರಿಗಳಿಗೆ ರೈತರ ಬಗ್ಗೆ ಮತ್ತು ರೈತ ಮಹಿಳೆಯರ ಜೊತೆ ಗೌರವಯುತವಾಗಿ ನಡೆದುಕೊಳ್ಳುವಂತೆ ತಿಳಿಸಬೇಕು, ನಡೆದಿರುವ ಘಟನೆಗೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ ಮಾತನಾಡಿ, ಅರಣ್ಯಾಧಿಕಾರಿಗಳು ರೈತರ ಜಮೀನುಗಳಲ್ಲಿ ಬೆಳೆದಿರುವ ಫಸಲನ್ನು ಕಾಪಾಡದೇ ಕಾಡುಪ್ರಾಣಿಗಳನ್ನು ನಿಯಂತ್ರಿಸಲು ನಿರ್ಲಕ್ಷ್ಯ ವಹಿಸಿರುವುದೇ ಈ ಘಟನೆಗೆ ಕಾರಣವಾಗಿದೆ. ಹಿರಿಯ ಅಧಿಕಾರಿಗಳು ಇಂತಹ ಘಟನೆ ನಡೆದಾಗ ತಕ್ಷಣ ಸ್ಪಂದಿಸಿ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬಹುದಾಗಿದೆ, ಇಲ್ಲಿನ ಜನಪ್ರತಿನಿಧಿ ಅಧಿಕಾರಿಗಳ ನಿರ್ಲಕ್ಷತನದಿಂದ ಈ ಭಾಗದ ರೈತರು ಪರಿತಪಿಸುವಂತಾಗಿದೆ ಎಂದರು.

ರಾಜ್ಯ ಉಪಾಧ್ಯಕ್ಷ ಮಹೇಶ್‌ ಪ್ರಭು, ಕಾರ್ಯದರ್ಶಿ ಪ್ರಸನ್ನ ಗೌಡ, ಜಿಲ್ಲಾ ಕಾರ್ಯದರ್ಶಿ ಭಾಸ್ಕರ್, ಕಾರ್ಯಾಧ್ಯಕ್ಷ ಶೈಲೇಂದ್ರ, ಹನೂರು ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್, ರೈತ ಮುಖಂಡರಾದ ಅರ್ಪಿತರಾಜ್ ಇನ್ನಿತರ ಮುಖಂಡರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.