ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಹಿನ್ನೆಲೆ ಕೃಷಿ ಹಾಗೂ ಇತರೆ ಕೂಲಿ ಕೆಲಸಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರಿಂದ ಸಿದ್ದಿ ಸಮುದಾಯದ ಅನೇಕ ಕುಟುಂಬಗಳು ದಿನನಿತ್ಯದ ಆಹಾರಕ್ಕೂ ಪರದಾಡುವಂತಾಗಿದೆ.

ಕಾರವಾರ: ಕಳೆದ 8- 9 ತಿಂಗಳಿಂದ ಸಿದ್ದಿ ಬುಡಕಟ್ಟು ಸಮುದಾಯಕ್ಕೆ ಸರ್ಕಾರದಿಂದ ದೊರೆಯಬೇಕಾದ ಪೌಷ್ಟಿಕ ಆಹಾರ ಕಿಟ್‌ಗಳ ವಿತರಣೆ ಸ್ಥಗಿತಗೊಂಡಿದ್ದು, ಬಡ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ನ. 30ರೊಳಗೆ ಆಹಾರ ಕಿಟ್‌ಗಳನ್ನು ವಿತರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ರಾಜ್ಯಾಧ್ಯಕ್ಷ ಬೆನಿತ್ ಅಂತೋನಿ ಸಿದ್ದಿ ಎಚ್ಚರಿಕೆ ನೀಡಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಹಿನ್ನೆಲೆ ಕೃಷಿ ಹಾಗೂ ಇತರೆ ಕೂಲಿ ಕೆಲಸಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರಿಂದ ಸಿದ್ದಿ ಸಮುದಾಯದ ಅನೇಕ ಕುಟುಂಬಗಳು ದಿನನಿತ್ಯದ ಆಹಾರಕ್ಕೂ ಪರದಾಡುವಂತಾಗಿದೆ. ಯಾವುದೇ ದಾಖಲೆ ಪತ್ರಗಳ ಅಡೆತಡೆಯಿಲ್ಲದೆ ನೇರವಾಗಿ ದೊರೆಯುತ್ತಿದ್ದ ಪೌಷ್ಟಿಕ ಆಹಾರ ಕಿಟ್ ಯೋಜನೆಯೂ ಸ್ಥಗಿತಗೊಂಡಿರುವುದು ಬಡ ಕುಟುಂಬಗಳ ಸಂಕಷ್ಟವನ್ನು ಹೆಚ್ಚಿಸಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.ಬಳಿಕ ಮಾತನಾಡಿದ ರಾಜ್ಯ ಕಾರ್ಯಾಧ್ಯಕ್ಷ ಲೊರೆನ್ಸ್ ಕೈತಾನ ಸಿದ್ದಿ, 2026- 27ನೇ ಸಾಲಿನ ಯೋಜನೆಯಡಿ ಕಳೆದ 8- 9 ತಿಂಗಳಿಂದ ಆಹಾರ ಕಿಟ್‌ಗಳ ಪೂರೈಕೆಯಾಗಿಲ್ಲ. ಕಾಡಂಚಿನ ಪ್ರದೇಶಗಳಲ್ಲಿ ವಾಸಿಸುವ ಬಡ ಕುಟುಂಬಗಳು ಹಾಗೂ ವೃದ್ಧರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 20,000 ಸಿದ್ದಿ ಸಮುದಾಯದ ಜನಸಂಖ್ಯೆಯಿದ್ದು, ಈ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿತ್ತು ಎಂದರು.ಈ ಹಿಂದೆ ಸಂಘಟನೆಯ ನಿರಂತರ ಹೋರಾಟ ಹಾಗೂ ಒತ್ತಾಯದ ಫಲವಾಗಿ ವರ್ಷದ 12 ತಿಂಗಳಿಗೂ ಹಂತ- ಹಂತವಾಗಿ ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ವಿತರಣೆ ಸ್ಥಗಿತಗೊಂಡಿರುವುದರಿಂದ ಸಮುದಾಯದ ಆಹಾರ ಭದ್ರತೆಗೆ ಧಕ್ಕೆಯಾಗಿದೆ. ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಬಾಕಿ ಇರುವ ಆಹಾರ ಕಿಟ್‌ಗಳನ್ನು ಪೂರೈಸಬೇಕು. ನ. 30ರೊಳಗೆ ಬೇಡಿಕೆ ಈಡೇರದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಗಸ್ತಿನ್ ಜುಜೆ ಸಿದ್ದಿ, ಗೌರಿ ಸಿದ್ದಿ, ಬಸ್ತ್ಯಾಂವ್ ಸಿದ್ದಿ, ಸಂಗೀತಾ ಸಿದ್ದಿ ಸೇರಿದಂತೆ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.